ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸುಮಾರು 100ಕ್ಕೂ ಅಧಿಕ ನಾಯಿಗಳನ್ನು ಹೂತು ಹಾಕಿರುವ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಗ್ರಾಮ ಪಂಚಾಯಿತಿಯ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಬೀದಿ ನಾಯಿಗಳಿಗೆ ವಿಷಹಾಕಿ ಅವುಗಳನ್ನು ಬಳಿಕ ಹೂತು ಹಾಕಿರುವ ಘಟನೆ ಭದ್ರಾವತಿ ತಾಲೂಕಿನ ರಂಗನಾಥಪುರದಲ್ಲಿ ನಡೆದಿದೆ. ಕಂಬದಾಳು-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಮ್ಮಡಿಹಳ್ಳಿಯಲ್ಲಿ ನಾಯಿಗಳನ್ನು ಜೀವಂತ ಸಮಾಧಿ ಮಾಡಲಾಗಿದೆ. ಗ್ರಾಮದಲ್ಲಿದ್ದ ಬೀದಿನಾಯಿಗಳು ಏಕಾಏಕಿ ಕಣ್ಮರೆಯಾಗಿದ್ದವು. ಗ್ರಾಮಸ್ಥರು ಈ ಕುರಿತು ಶಿವಮೊಗ್ಗದ ಪ್ರಾಣಿ ರಕ್ಷಣಾ ಕ್ಲಬ್‌ಗೆ ಮಾಹಿತಿ ಕೊಟ್ಟಿದ್ದರು. ಕ್ಲಬ್ ಸದಸ್ಯರು ಪೊಲೀಸರು ಮತ್ತು ಪಶು ವೈದ್ಯಾಧಿಕಾರಿಗಳ ಜೊತೆಗೆ ಗ್ರಾಮಕ್ಕೆ ಮಂಗಳವಾರ ಸಂಜೆ ಆಗಮಿಸಿದ್ದರು. ಪರಿಶೀಲನೆ ನಡೆಸಿದಾಗ ಬೀದಿನಾಯಿಗಳನ್ನು ಹೂತುಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ನಾಯಿಗಳನ್ನು ಜೀವಂತವಾಗಿ ಹೂತು ಹಾಕಿರುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಲಾಗಿದೆ.
ಪ್ರಾಣಿ ರಕ್ಷಣಾ ಕ್ಲಬ್ ಸದಸ್ಯರು ಬುಧವಾರ ಭದ್ರಾವತಿ ಗ್ರಾಮೀಣ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಸುಮಾರು 100ಕ್ಕೂ ಅಧಿಕ ನಾಯಿಗಳನ್ನು ಹೂತು ಹಾಕಲಾಗಿದೆ ಎಂಬುದು ಆರೋಪವಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಗ್ರಾಮ ಪಂಚಾಯಿತಿ ಅಧಿಕಾರಿಗಳು ನಾಯಿಗಳನ್ನು ಕೊಂದು ಅವುಗಳನ್ನು ಹೂತು ಹಾಕಿದ್ದಾರೆ. ಗ್ರಾಮ ಪಂಚಾಯಿತಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ” ಎಂದು ಹೇಳಿದ್ದಾರೆ.