ಕಲಬುರಗಿ ಮಹಾನಗರ ಪಾಲಿಕೆ ಫಲಿತಾಂಶ ಅತಂತ್ರವಾದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕಿಂಗ್ ಮೇಕರ್ ಆಗಿರುವ ಜೆಡಿಎಸ್ ಬೆಂಬಲ ಕೊಡುವಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ.
ಬಿಡದಿಯ ಕೇತುಗಾನಹಳ್ಳಿ ತೋಟದ ಮನೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾದ ಕಂದಾಯ ಸಚಿವ ಆರ್. ಅಶೋಕ್, “ಕಲಬುರಗಿ ಪಾಲಿಕೆ ಚುನಾವಣೆಗೆ ನಮ್ಮ ಪಕ್ಷಕ್ಕೆ ಬೆಂಬಲ ಕೊಡುವಂತೆ ಮಾತನಾಡಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಲಬುರಗಿ ಪಾಲಿಕೆ ಬೆಂಬಲದ ಬಗ್ಗೆ ಕುಮಾರಸ್ವಾಮಿ ಸೋಮವಾರ ಸದನದಲ್ಲಿ ಚರ್ಚಿಸೊಣ ಎಂದಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೊತೆಗೆ ಚರ್ಚಿಸಿ ಒಂದೊಳ್ಳೆ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ದೊಡ್ಡಬಳ್ಳಾಪುರದ ಚುನಾವಣೆ ವಿಷಯದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ
ಹಾಗೆಯೇ ಕಲಬುರಗಿ ಪಾಲಿಕೆ ಚುಕ್ಕಾಣಿಗೆ ಜೆಡಿಎಸ್- ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್, “ಹಾಗೇನು ಇಲ್ಲ, ಕಾಂಗ್ರೆಸ್‌ನಲ್ಲೇ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಲ್ಲೇ ಒಮ್ಮತವಿಲ್ಲ. ಮೇಯರ್ ಪಟ್ಟದ ಡಿಮ್ಯಾಂಡ್ ಕೂಡ ಚರ್ಚೆಯಾಗಿಲ್ಲ,” ಎಂದು ಸ್ಪಷ್ಟಪಡಿಸಿದರು.
ಸಚಿವ ಅಶೋಕ್ ಭೇಟಿಯ ಬಗ್ಗೆ ಟ್ವಿಟ್ ಮಾಡಿದ ಮಾಜಿ ಸಿಎಂ ಎಚ್‌ಡಿಕೆ, ಇನ್ನು ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಬೆಂಬಲ ಕೋರಿ ಬಿಡದಿ ಬಳಿಯ ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ಸಚಿವ ಆರ್. ಅಶೋಕ್ ಭೇಟಿಯಾಗಿ ಚರ್ಚಿಸಿರುವುದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಜಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.