ಉತ್ತರ ಒಡಿಶಾದಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತದ ಪರಿಣಾಮವಾಗಿ ಮುಂದಿನ ಐದು ದಿನಗಳ ಕಾಲ ದೇಶದಾದ್ಯಂತ ಸುಮಾರು ಹತ್ತು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮಧ್ಯ ಹಾಗೂ ವಾಯವ್ಯ ಭಾರತದಲ್ಲಿ ಶನಿವಾರ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಮಾರುತಗಳು 13 ಕಿ.ಮೀ ವೇಗದಲ್ಲಿ ಪಶ್ಚಿಮ ಹಾಗೂ ವಾಯವ್ಯ ದಿಕ್ಕಿಗೆ ಚಲಿಸಲಿವೆ. ಇದರಿಂದಾಗಿ ಮುಂದಿನ 48 ಗಂಟೆಗಳಲ್ಲಿ ಉತ್ತರ ಛತ್ತೀಸ್‌ಗಡ, ಮಧ್ಯ ಪ್ರದೇಶದಲ್ಲಿ ಅಧಿಕ ಮಳೆ ಉಂಟಾಗಲಿದೆ ಎಂದು ತಿಳಿಸಿದೆ. ಒಡಿಶಾದಲ್ಲಿ ಭಾರೀ ಮಳೆ ಆಗುತ್ತಿದ್ದು, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ತೀರಗಳಲ್ಲಿ ಎಚ್ಚರಿಕೆ ರವಾನಿಸಲಾಗಿದೆ.
ಬುಧವಾರದ ನಂತರ ಮಾರುತಗಳು ದುರ್ಬಲಗೊಳ್ಳಲಿವೆ. ಇದರ ಮಧ್ಯೆ ಗುಜರಾತ್‌ನಲ್ಲಿ ಮತ್ತೊಂದು ವಾಯುಭಾರ ಕುಸಿತ ಸಂಭವಿಸಲಿದ್ದು, ಮುಂದಿನ ಮೂರ್ನಾಲ್ಕು ದಿನಗಳವರೆಗೂ ಇದರ ಪ್ರಭಾವ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಿದೆ. ಇದರಿಂದಾಗಿ ಸೆಪ್ಟೆಂಬರ್ 18ರವರೆಗೂ ಕೆಲವೆಡೆ ಮಳೆಯಾಗುವ ಸೂಚನೆ ನೀಡಲಾಗಿದೆ.
ಭಾನುವಾರ ಗುಜರಾತ್‌ನಲ್ಲಿ 13 ಇಂಚು ಮಳೆಯಾಗಿದೆ. ಸೋಮವಾರ ಮಳೆ ಮುಂದುವರೆದಿದ್ದು, ಮಂಗಳವಾರ ಕೂಡ ಅಧಿಕ ಮಳೆಯಾಗುವ ಸೂಚನೆ ನೀಡಲಾಗಿದೆ. 1400 ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ತಿಳಿಸಿದೆ.
ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಉತ್ತರ ಕೊಂಕಣದಲ್ಲಿ ಸೆಪ್ಟೆಂಬರ್ 17ರವರೆಗೂ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಸೆಪ್ಟೆಂಬರ್ 15ರಂದು ಮಧ್ಯಪ್ರದೇಶ, ಗುಜರಾತ್‌ನಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ.
ಕರ್ನಾಟಕದ ಕರಾವಳಿ, ಉತ್ತರ ಒಳನಾಡು, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಸೆಪ್ಟೆಂಬರ್ 15ರವರೆಗೂ ಮಳೆ ಮುಂದುವರೆಯುವುದಾಗಿ ಹೇಳಿದೆ. ನೈಋತ್ಯ ಭಾರತದಲ್ಲಿ ಮಳೆ ಪ್ರಮಾಣ ಹೆಚ್ಚಲಿದ್ದು, ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನದಲ್ಲಿ ಸೆಪ್ಟೆಂಬರ್ 16ರ ನಂತರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವುದಾಗಿ ತಿಳಿಸಿದೆ