ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ದಾವಣಗೆರೆಯಲ್ಲಿ ಮುಕ್ತಾಯಗೊಂಡಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಗಟ್ಟಿಗೊಳಿಸಬೇಕು ಮತ್ತು ಚುನಾವಣೆಯನ್ನು ಎದುರಿಸುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸವಿಸ್ತಾರವಾಗಿ ಮಾತನಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷಗಳು ಬಲವೃದ್ದನೆಗೊಳ್ಳುತಿರುವ ಬಗ್ಗೆ ಯಡಿಯೂರಪ್ಪನವರು ಸ್ವಪಕ್ಷೀಯರಿಗೆ ಬುದ್ದಿಮಾತನ್ನು ಹೇಳಿದ್ದಾರೆ. ಭ್ರಮೆಯಲ್ಲಿ ಇರಬೇಡಿ, ಎಲ್ಲಾ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ ಎನ್ನುವ ಬೋಧನೆಯನ್ನು ಮಾಡಿದ್ದಾರೆ.
ತಮ್ಮ ರಾಜ್ಯ ಪ್ರವಾಸದ ಬಗ್ಗೆ ಇದ್ದ ಗೊಂದಲವನ್ನು ತಿಳಿಗೊಳಿಸಿರುವ ಯಡಿಯೂರಪ್ಪನವರು, “ನಾನೊಬ್ಬನೇ ರಾಜ್ಯ ಪ್ರವಾಸಕ್ಕೆ ಹೋಗುತ್ತಿಲ್ಲ. ನನ್ನ ಜೊತೆಗೆ ಪಕ್ಷದ ಅಧ್ಯಕ್ಷರು ಇರುತ್ತಾರೆ, ಆಯಾಯ ಸಂಸದರು, ಶಾಸಕರು, ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಇರುತ್ತಾರೆ” ಎಂದು ಬಿಎಸ್ವೈ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಯಡಿಯೂರಪ್ಪನವರು ಹಾಡಿಹೊಗಳಿದರೂ, ಅವರ ಹೆಸರೇ ಗೆಲುವಿನ ಮಂತ್ರ ಎನ್ನುವ ಭ್ರಮೆ ಇಟ್ಟುಕೊಳ್ಳಬೇಡಿ ಎನ್ನುವ ಮಾತನ್ನಾಡಿದ್ದಾರೆ. ಇಷ್ಟು ದಿನ ಮೋದಿ, ಅಮಿತ್ ಶಾ ಜಪವನ್ನೇ ಮಾಡುತ್ತಿದ್ದ ರಾಜ್ಯ ಬಿಜೆಪಿಯವರು, ಬಿಎಸ್ವೈ ಹೇಳಿಕೆಯನ್ನು ಯಾವ ರೀತಿ ಅರ್ಥೈಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕಿದೆ.