ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದರೆ ಚಾಲನಾ ಪರವಾನಗಿ ಅಮಾನತು ಆಗಲಿದೆ ಹುಷಾರ್ ! ಇನ್ನು ರಸ್ತೆಗಳಲ್ಲಿ ಬೇಕಾಬಿಟ್ಟಿ ವ್ಹೀಲಿಂಗ್ ಮಾಡಿ ಜನರಲ್ಲಿ ಭೀತಿ ಹುಟ್ಟಿಸಿದರೆ ಜೈಲಿಗೆ ಹೋಗಬೇಕಾದೀತು! ಕೋವಿಡ್ ಹಿನ್ನೆಲೆಯಲ್ಲಿ “ಡ್ರಿಂಕ್ ಅಂಡ್ ಡ್ರೈವ್ ” ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಸಂಚಾರ ಪೊಲೀಸರು ಇದೀಗ ಬೆಂಗಳೂರು ರಸ್ತೆಗೆ ಇಳಿದಿದ್ದಾರೆ. ಕುಡಿದು ವಾಹನ ಚಾಲನೆ ಮಾಡಿದರೆ ಚಾಲನ ಪರವಾನಗಿ ಅಮಾನತು ಮಾಡಲಾಗುತ್ತಿದೆ. ಜತೆಗೆ ಸಾವಿರಾರು ರೂಪಾಯಿ ದಂಡವನ್ನು ವಿಧಿಸುತ್ತಿದ್ದಾರೆ. ಅಪಾಯಕಾರಿ ವ್ಹೀಲಿಂಗ್ ಮಾಡುವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತಿದೆ.
ಕೋರಮಂಗಲದ ಕಲ್ಯಾಣ ಮಂಟಪದ ಬಳಿ ತಮಿಳುನಾಡಿನ ಶಾಸಕ ಪುತ್ರನೊಬ್ಬನ ಅಡಿ ಕಾರು ಅಪಘಾತ ಪ್ರಕರಣದಲ್ಲಿ ಏಳು ಮಂದಿ ಸಾವಿಗೀಡಾಗಿದ್ದರು. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬಳಿ ಸಂಭವಿಸಿದ ಕಾರು ಅಪಘಾತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತಗಳಿಗೆ ಮದ್ಯ ಸೇವನೆ ಅಥವಾ ಮಾದಕ ವಸ್ತು ಸೇವನೆ ಮಾಡಿ ಅಪಾಯಕಾರಿ ಚಾಲನೆ ಮಾಡಿರುವುದು ಕಾರಣ ಎಂಬುದು ಗೊತ್ತಾಗುತ್ತಿದ್ದಂತೆ ಸಂಚಾರ ವಿಭಾಗದ ಪೊಲೀಸರನ್ನು ರಾತ್ರಿ ಕಾರ್ಯಾಚರಣೆಗೆ ಇಳಿಸಲಾಗಿದೆ.