ಕೊರೊನಾ ಸೋಂಕಿನಿಂದ ತತ್ತರಿಸಿದ್ದ ಬೆಣ್ಣೆನಗರಿ ಜನರು ಶಾಕ್ ಆಗುವಂತಹ ಮಾಹಿತಿ ಹೊರಬಿದ್ದಿದೆ. ದಾವಣಗೆರೆ ಜಿಲ್ಲೆಯಲ್ಲಿ ಡೆಂಗ್ಯೂ, ಮಕ್ಕಳಲ್ಲಿ ಶೀತ, ಜ್ವರ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಬೇಬಿ ಸುಮಯ ಕೌಸರ್ ಎಂಬಾಕೆ ಡೆಂಗ್ಯೂಗೆ ಬಲಿಯಾಗಿರುವುದು ದುಗುಡ ಹೆಚ್ಚಾಗುವಂತೆ ಮಾಡಿದೆ. ಈ ಮೂಲಕ ಈ ವರ್ಷ ಡೆಂಗ್ಯೂಗೆ ತುತ್ತಾಗಿ ಸಾವನ್ನಪ್ಪಿದ ಮೊದಲ ವಿದ್ಯಾರ್ಥಿನಿ ಈಕೆ.
ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಜ್ವರ, ಶೀತ, ಕೆಮ್ಮು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಬಳಲುತ್ತಿರುವ ಮಕ್ಕಳನ್ನು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್. ಆರ್. ಬೀಳಗಿ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ವಾತಾವರಣ ಬದಲಾಗುತ್ತದೆ. ಸಾಮಾನ್ಯವಾಗಿ ವೈರಲ್ ಜ್ವರ ಹಾಗೂ ಡೆಂಗ್ಯೂ ಜ್ವರ ಹೆಚ್ಚಾಗಿ ಹರಡುತ್ತಿದ್ದು, ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗಳಲ್ಲಿ ಮಕ್ಕಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ವೈದ್ಯರು ಹಾಗೂ ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದ್ದಾರೆ.