ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ದ ಜೆಡಿಎಸ್, ಕೆ.ಆರ್. ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಮತ್ತೆ ತಿರುಗಿಬಿದ್ದಿದ್ದಾರೆ. ಮಂಗಳವಾರದ (ಸೆ 21) ಅಧಿವೇಶನದಲ್ಲಿ ಮಹೇಶ್ ಅವರು ರೋಹಿಣಿ ವಿರುದ್ದ ಹಕ್ಕುಚ್ಯುತಿ ಪ್ರಸ್ತಾಪ ಮಾಡಿದ್ದಾರೆ.
ಇದರ ಜೊತೆಗೆ ಬ್ಯಾಗ್ ಖರೀದಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರದ ಬಗ್ಗೆಯೂ ಸಾ.ರಾ.ಮಹೇಶ್ ಧ್ವನಿ ಎತ್ತಿದ್ದಾರೆ. “ಬಟ್ಟೆ, ಬ್ಯಾಗ್ ಖರೀದಿಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ. ಸುಮಾರು 6 ಕೋಟಿ ರೂ. ಅಕ್ರಮ ನಡೆದಿದೆ. ಸುಮಾರು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಆದರೆ ಇದರ ವಾಸ್ತವ ಬೆಲೆ 1,47,15,000 ಆಗಿದೆ. ಅವರು 7 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಅವರು ಬ್ಯಾಗ್‍ನಲ್ಲೇ 6 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ” ಎಂದು ಮಹೇಶ್ ಆರೋಪಿಸಿದ್ದರು.
ಸದನದಲ್ಲಿ ಈ ಬಗ್ಗೆ ಮಾತನಾಡುತ್ತಿದ್ದ ಮಹೇಶ್, “ವಾಲ್ಮೀಕಿ ಜಯಂತಿ ಆಚರಣೆಯ ಸಂದರ್ಭದಲ್ಲಿ ಉಸ್ತುವಾರಿ ಸಚಿವರು, ಸಂಬಂಧ ಪಟ್ಟ ಶಾಸಕರು ಆ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ಇವರು (ರೋಹಿಣಿ) ರಜೆ ಹಾಕಿ ರೆಸಾರ್ಟಿಗೆ ಹೋಗುತ್ತಾರೆ. ಇದಾ ಜಿಲ್ಲಾಧಿಕಾರಿಯಾಗಿರುವವರು ನಡೆದುಕೊಳ್ಳುವ ರೀತಿ” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. “ಮುಖ್ಯಮಂತ್ರಿಗಳ ಮನೆಯಲ್ಲಿ ಇಲ್ಲ, ಸ್ಪೀಕರ್ ಅವರ ಮನೆಯಲ್ಲೂ ಈಜುಕೊಳವಿಲ್ಲ, ನಲವತ್ತು ಲಕ್ಷ ರೂಪಾಯಿ ಖರ್ಚು ಮಾಡಿ ಅವರ ಮನೆಗೆ ಈಜುಕೊಳ ನಿರ್ಮಿಸಿದ್ದಾರೆ”ಎಂದು ಸಾ.ರಾ.ಮಹೇಶ್ ಮತ್ತೆ ಹಳೆಯ ಆರೋಪವನ್ನು ಸದನದಲ್ಲಿ ತಂದರು. ರೋಹಿಣಿ ಸಿಂಧೂರಿ ವಿರುದ್ದ ತನಿಖೆ ಪ್ರಕ್ರಿಯೆ ಆರಂಭಿಸಿದ ಸರಕಾರ.