“ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮಿಯ್ಯಾಪೂರ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದ 4 ವರ್ಷದ ಮಗುವೊಂದು ದೇವಸ್ಥಾನದೊಳಗೆ ಪ್ರವೇಶಿಸಿದ ಬಗ್ಗೆ ದಂಡ ವಿಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಲಾಗಿದೆ,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ತಿಳಿಸಿದ್ದಾರೆ.
“ಇದೇ ಸೆ.04ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮಿಯ್ಯಾಪೂರ ಗ್ರಾಮದ ಪರಿಶಿಷ್ಟ ಜನಾಂಗಕ್ಕೆ ಸೇರಿದ ವ್ಯಕ್ತಿ ತನ್ನ 4 ವರ್ಷದ ಮಗನ ಹುಟ್ಟುಹಬ್ಬದ ಪ್ರಯುಕ್ತ ಪೂಜೆ ಮಾಡಿಸಲು ಗ್ರಾಮದ ಮಾರುತೇಶ್ವರ (ಆಂಜನೇಯ) ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದು, ಪೂಜೆ ಮಾಡಿಸುವ ವೇಳೆ ಮಳೆ ಬಂದ ಕಾರಣ ಮಗು ದೇವಸ್ಥಾನದ ಒಳಗಡೆ ಹೋಗಿದ್ದರಿಂದ ಮಗುವಿನ ತಂದೆ ದೇವಸ್ಥಾನದ ಒಳಗಡೆ ಹೋಗಿ ತನ್ನ ಮಗನನ್ನು ಕರೆದುಕೊಂಡು ಬಂದಿದ್ದರು.”
“ಇದನ್ನು ನೋಡಿದ ದೇವಸ್ಥಾನದ ಪೂಜಾರಿ ಮತ್ತು ಗ್ರಾಮದ ಕೆಲ ಸವರ್ಣೀಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಗ್ರಾಮದ ಮುಖಂಡರು ಸಭೆ ಸೇರಿ ದೇವಸ್ಥಾನ ಅಪವಿತ್ರವಾಗಿದೆ, ಶುದ್ಧಿ ಕಾರ್ಯ ಮಾಡಲು ದಂಡ ಕಟ್ಟಬೇಕು ಎಂದು ಒತ್ತಾಯ ಮಾಡಿದ್ದರು.”
“ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಸೆ.21ರಂದು ಸರ್ಕಾರದ ವತಿಯಿಂದ ಕುಷ್ಟಗಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ 5 ಜನರ ವಿರುದ್ಧ ಎಸ್‌ಸಿ/ ಎಸ್‌ಟಿ ಕಾಯ್ದೆ- 2015ರ ಪ್ರಕಾರ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.