ಕರ್ನಾಟಕ ರಾಜ್ಯ ಸರ್ಕಾರವು ಅಕ್ಟೋಬರ್ 1 ರಿಂದ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯಬಹುದು ಎಂದು ಆದೇಶ ನೀಡುತ್ತಿದ್ದಂತೆ, ಕನ್ನಡ ಚಿತ್ರರಂಗ ಮತ್ತೆ ಗರಿಗೆದರಿದ್ದು, ಒಂದೊಂದಾಗಿ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಆಗುತ್ತಿದೆ.
ಮೊದಲಿಗೆ ‘ಭಜರಂಗಿ 2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಸಿನಿಮಾವು ಅಕ್ಟೋಬರ್ 29ಕ್ಕೆ ತೆರೆಗೆ ಬರಲಿದೆ. ‘ಭಜರಂಗಿ 2’ ಸಿನಿಮಾದ ಬಿಡುಗಡೆ ಬಳಿಕ ‘ಸಲಗ’ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿ ‘ಭಜರಂಗಿ 2’ಗಿಂತಲೂ ಮೊದಲೇ ‘ಸಲಗ’ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘ಸಲಗ’ ಸಿನಿಮಾವು ದಸರಾ ಹಬ್ಬದಂದು (ಅಕ್ಟೋಬರ್ 14) ಕ್ಕೆ ಬಿಡುಗಡೆ ಆಗಲಿದೆ. ಆದರೆ ಸಿನಿಮಾದ ಬಿಡುಗಡೆ ದಿನಾಂಕ ಘೊಷಣೆ ಬೆನ್ನಲ್ಲೆ ಸಮಸ್ಯೆಯೊಂದು ಎದುರಾಗಿದೆ. ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗುತ್ತಿದೆ. ಇದು ಎರಡೂ ಸಿನಿಮಾಗಳಿಗೆ ಸಂಕಷ್ಟ ತಂದಿಟ್ಟಿದೆ.
ದುನಿಯಾ ವಿಜಯ್ ಹಾಗೂ ಸುದೀಪ್ ಇಬ್ಬರಿಗೂ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವುದರಿಂದ ಸ್ಟಾರ್ ವಾರ್ ಗ್ಯಾರೆಂಟಿ ಎನ್ನಲಾಗುತ್ತಿದೆ. ಆದರೆ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುವುದರಿಂದ ನಿರ್ಮಾಪಕರಿಗೆ ಕಷ್ಟವಾಗುತ್ತದೆ ಎಂದು ಈಗಾಗಲೇ ಎರಡೂ ಸಿನಿಮಾಗಳ ಚಿತ್ರತಂಡದ ನಡುವೆ ಸಂಧಾನ ಮಾತುಕತೆಗಳು ಆರಂಭವಾಗಿವೆ.
‘ಸಲಗ’ ಸಿನಿಮಾದ ನಿರ್ಮಾಪಕ ಸುದೀಪ್‌ಗೆ ಗೆಳೆಯರೇ ಆಗಿದ್ದು, ಸಿನಿಮಾದ ಬಿಡುಗಡೆ ಕುರಿತಂತೆ ಮಾತುಕತೆ ಮಾಡಲು ನಾಳೆಯೇ ಸುದೀಪ್ ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಅದರ ಬೆನ್ನಲ್ಲೆ ನಟ ಸುದೀಪ್ ಸಹ ಟ್ವೀಟ್ ಮಾಡಿ ‘ಸಲಗ’ ನಿರ್ಮಾಪಕ ಕೆಪಿ ಶ್ರೀಕಾಂತ್ ಹಾಗೂ ನಟ ದುನಿಯಾ ವಿಜಯ್‌ಗೆ ಶುಭ ಹಾರೈಸಿದ್ದಾರೆ.
ನಟ ದುನಿಯಾ ವಿಜಯ್ ಸಹ ಈ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ್ದು, ”ಸಿನಿಮಾ ಬಿಡುಗಡೆ ದಿನಾಂಕವನ್ನು ಮಾರುಕಟ್ಟೆ ಆಧರಿಸಿ ನಿರ್ಮಾಪಕರು ನಿಶ್ಚಯ ಮಾಡುತ್ತಾರೆ. ಅದರಲ್ಲಿ ಹೀರೋಗಳ ಪಾತ್ರ ಏನೂ ಇರುವುದಿಲ್ಲ. ನಾನು, ಸುದೀಪ್ ಚೆನ್ನಾಗಿಯೇ ಇದ್ದೇವೆ, ಚೆನ್ನಾಗಿಯೇ ಇರ್ತೇವೆ” ಎಂದಿದ್ದಾರೆ.