ದಸರಾ ಜಂಬೂಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಿ ಹಾಗೂ ಸರಳವಾಗಿ ನಡೆಯುತ್ತಿರುವ ಕಾರಣ ಈ ಬಾರಿ 6 ಸ್ತಬ್ಧಚಿತ್ರಗಳು ಮಾತ್ರ ಭಾಗವಹಿಸುತ್ತಿವೆ.
ಮೈಸೂರಿನ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಸ್ತಬ್ಧಚಿತ್ರಗಳ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭಾನುವಾರ ಸ್ತಬ್ಧಚಿತ್ರಗಳ ತಯಾರಿಯನ್ನು ಪರಿಶೀಲನೆ ಮಾಡಿದರು.
ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಆಧುನಿಕತೆಯ ಉತ್ತಮ ಸಂದೇಶ ಸಾರುವ ಸ್ತಬ್ಧಚಿತ್ರಗಳು ಅತ್ಯಾಕರ್ಷಕವಾಗಿ ನಿರ್ಮಾಣವಾಗುತ್ತಿವೆ ಎಂದು ಇದೇ ವೇಳೆ ಸಚಿವರು ಹೇಳಿದರು. ಜಂಬೂಸವಾರಿ ಮೆರವಣಿಗೆಗೆ ಕೇವಲ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದ್ದು, ಮೈಸೂರಿನಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದಸರಾ ಸರಳವಾಗಿ ಆಚರಣೆಯಾದರೂ, ನಗರದಾದ್ಯಂತ ಮಾಡಿರುವ ವಿದ್ಯುದ್ದೀಪಲಂಕಾರ ನೋಡಲು ಸಹಸ್ರಾರು ಜನರು ಮೈಸೂರಿಗೆ ಬರುತ್ತಿದ್ದಾರೆ.