ಪೊಲೀಸರಿಬ್ಬರು ಕರ್ತವ್ಯದಲ್ಲಿ ಇರುವಾಗಲೇ ಸಮವಸ್ತ್ರ ಧರಿಸಿಕೊಂಡೇ ಮದ್ಯಪಾನ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಅವರನ್ನು ಸಾರ್ವಜನಿಕರು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ.
ಹಾಸನ ಜಿಲ್ಲೆಯ ಲಕ್ಷ್ಮಿಪುರಂ ಬಡಾವಣೆಯಲ್ಲಿರುವ ಬಾರೊಂದರಲ್ಲಿನ ಪ್ರತ್ಯೇಕ ಕೊಠಡಿಯಲ್ಲಿ ಇಬ್ಬರು ಸಮವಸ್ತ್ರದಲ್ಲಿದ್ದ ಪೊಲೀಸರು, ಇನ್ನೊಬ್ಬ ಸಮವಸ್ತ್ರದಲ್ಲಿರದ ವ್ಯಕ್ತಿ ಸೇರಿ ಮದ್ಯಪಾನ ಸೇವಿಸುತ್ತಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಯಾರೋ ಆ ಕೊಠಡಿಗೆ ಪ್ರವೇಶಿಸಿದ್ದಾರೆ.
ಪೊಲೀಸರನ್ನು ಕಂಡ ಸಾರ್ವಜನಿಕರು ನೀವು ಸಮವಸ್ತ್ರ ಧರಿಸಿಕೊಂಡು ಹೀಗೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಜನಸಾಮಾನ್ಯರು ತಪ್ಪು ಮಾಡಿದರೆ ಗೋಳುಹುಯ್ದುಕೊಳ್ಳುವ ನೀವೇ ಹೀಗೆ ತಪ್ಪು ಮಾಡಿದರೆ ಹೀಗೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕೆ ಸರಿಯಾಗಿ ಉತ್ತರಿಸಲಾಗದೆ ಪೊಲೀಸರು ತಬ್ಬಿಬ್ಬಾದ ದೃಶ್ಯಗಳು, ಮದ್ಯಪಾನ ಮಾಡುತ್ತಿದ್ದ ಚಿತ್ರಣ ಈ ವಿಡಿಯೋದಲ್ಲಿ ಸೆರೆಯಾಗಿದೆ.