ರಾಜ್ಯ ದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಯಾಗುವ ಸಾಧ್ಯತೆ ಇದ್ದು, ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಅಧಿಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಬಲವಾದ ತಂಪಾದ ಮೇಲ್ಮೈ ಗಾಳಿ ಬೀಸುತ್ತಿರುವುದರಿಂದ ಚಳಿಯ ಪ್ರಮಾಣವೂ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ, ಬೆಳ್ತಂಗಡಿ, ಪುತ್ತೂರು ತಾಲೂಕಿನ ಹಲವೆಡೆ ಎಡೆಬಿಡದೆ ಮಳೆ ಸುರಿದಿದ್ದು, ಕೃಷಿ ಭೂಮಿ ಮತ್ತು ತೋಟಗಳಿಗೆ ನೀರು ನುಗ್ಗಿದ್ದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದೇ ರೀತಿ ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಅರಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ವಾಯುಭಾರ ಕುಸಿತ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನ ಮಳೆಯ ಆರ್ಭಟ ಇರಲಿದೆ. ಜೊತೆಗೆ ಬೆಂಗಳೂರಿನಲ್ಲಿಯೂ ವ್ಯಾಪಾಕ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ ಇದೀಗ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ.
ಇನ್ನೂ ಕಳೆದ ಎರಡ್ಮೂರು ದಿನಗಳಿಂದ ಬೆಣ್ಣೆ ನಗರಿ ದಾವಣಗೆರೆಯಲ್ಲೂ ವರುಣನ ಆರ್ಭಟ ಮುಂದುವರಿದಿದೆ. ಸುರಿದ ಬಿರುಗಾಳಿ ಸಹಿತ ಸುರಿದ ಮಳೆಗೆ 40 ಎಕರೆ ಭತ್ತ ನಾಶವಾಗಿದೆ. ದಾವಣಗೆರೆ ತಾಲೂಕಿನ ಶಾಗಲೆ ಗ್ರಾಮದ 20ಕ್ಕೂ ಅಕ ರೈತರ ಬೆಳೆ (ಭತ್ತ) ನಾಶಗೊಂಡು ನೆಲ ಕಚ್ಚಿದೆ.
ಇನ್ನು ಒಂದು ವಾರದಲ್ಲಿ ಭತ್ತ ಕಟಾವು ಮಾಡಲು ರೈತರು ಸಿದ್ಧತೆ ನಡೆಸಿದ್ದರು. ರೈತರು ಎಕರೆ ಭತ್ತಕ್ಕೆ ಸುಮಾರು 25 ರಿಂದ 30 ಸಾವಿರ ರೂ. ಖರ್ಚು ಮಾಡಿದ್ದರು, ಇದೀಗ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ಸರ್ಕಾರ ರೈತರ ಸಹಾಯಕ್ಕೆ ಮುಂದಾಗಬೇಕಿದೆ ಎಂದು ಅನ್ನದಾತರು ಆಗ್ರಹಿಸಿದ್ದಾರೆ.
ಅಕ್ಕಿಆಲೂರು, ಜಯಪುರ, ಬೆಂಗಳೂರು, ಸಕಲೇಶಪುರ, ಪಾವಗಡ, ಚಿಕ್ಕಮಗಳೂರು, ಕಾರ್ಕಳ, ಕೋಟಾ, ಮೂಡುಬಿದಿರೆ, ಬಾಳೆಹೊನ್ನೂರು, ಭಾಗಮಂಡಲ, ಧರ್ಮಸ್ಥಳ, ಉಡುಪಿ, ಕೊಲ್ಲೂರು, ಸಿದ್ದಾಪುರ, ಬ್ರಹ್ಮಾವರ, ಹಾನಗಲ್, ಆಗುಂಬೆ, ಅಗ್ರಹಾರ ಕೋಣಂದೂರು, ದಾವಣಗೆರೆಯಲ್ಲಿ
ಮಳೆಯಾಗಿದೆ.