ಕಳೆದ ಕೆಲ ತಿಂಗಳುಗಳಿಂದ ತಮ್ಮ ಹಾಗೂ ಕುಟುಂಬದ ಮೇಲೆ ಆಗುತ್ತಿರುವ ತೀವ್ರ ವಾಗ್ದಾಳಿಯಿಂದ ಅಪಮಾನಗೊಂಡಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಭಾರಿ ಶಪಥವೊಂದನ್ನು ಮಾಡಿದ್ದಾರೆ.
ಮುಖ್ಯಮಂತ್ರಿ ಆಗುವವರೆಗೂ ನಾನು ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ವಿಧಾನಸಭೆಯಲ್ಲಿ ತಮ್ಮ ಪತ್ನಿ ಭುವನೇಶ್ವರಿಗೆ ವಿಧಾನಸಭೆಯಲ್ಲಿ ತೀವ್ರವಾಗಿ ಅವಮಾನ ಮಾಡಲಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಇಷ್ಟೊಂದು ನೋವು ಹಿಂದೆಂದೂ ಅನುಭವಿಸಿಲ್ಲ. ನನ್ನ ಜೀವನದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲು. ವಿಧಾನಸಭೆ ಆರಂಭವಾದಾಗಿನಿಂದಲೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರು ನಿಂದಿಸುತ್ತಲೇ ಬಂದಿದ್ದಾರೆ. ಅವರು ನನ್ನ ಕುಟುಂಬದವರನ್ನೂ ಬಿಡಲಿಲ್ಲ. ಇದನ್ನು ನಾನು ಸಹಿಸಲು ಸಾಧ್ಯವೇ ಇಲ್ಲ. ಅಧಿಕಾರ ಸಿಗುವವರೆಗೂ ನಾನಿಲ್ಲಿ ಕಾಲಿಡಲ್ಲ’ ಎಂದು ನಾಯ್ಡು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸುತ್ತಾ ಗಳಗಳನೆ ಅತ್ತಿದ್ದಾರೆ.