ಯುವತಿಯರ ಮದುವೆ ವಯಸ್ಸನ್ನು 18 ವರ್ಷದಿಂದ 21ವರ್ಷಕ್ಕೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸಂಸತ್ನಲ್ಲಿ ಮಸೂದೆ ಮಂಡಿಸಲು ಕ್ಯಾಬಿನೆಟ್ ಒಪ್ಪಿಗೆಯೂ ದೊರೆತಿದೆ. ಕೇಂದ್ರದ ನಿರ್ಧಾರ ಸದ್ಯ ದೇಶ್ಯಾದ್ಯಂತ ಚರ್ಚೆ ಹುಟ್ಟುಹಾಕಿದೆ. ಈ ಮಧ್ಯೆ ಸಂಸದರೊಬ್ಬರು ಹುಡಗಿಯರು 16 ವರ್ಷಕ್ಕೆ ಮದುಯೆಯಾದ್ರೂ ತಪ್ಪಿಲ್ಲ ಅಂತಾ ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರ ಮದುವೆ ಬಗ್ಗೆ ಹೊಸ ಕಾಯ್ದೆಯೊಂದನ್ನು ಜಾರಿಗೊಳಿಸಲು ಸಜ್ಜಾಗಿದೆ. ಮದುವೆಗೆ ಹುಡುಗಿಯರ ಕನಿಷ್ಠ ವಯಸ್ಸನ್ನು ಈಗಿನ 18 ವರ್ಷದಿಂದ 21ವರ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸರ್ಕಾರದ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆಯೂ ದೊರೆತಿದೆ. ಚಳಿಗಾಲದ ಅಧಿವೇಶನದಲ್ಲೇ ಈ ಮಸೂದೆಯನ್ನು ಮಂಡಿಸಿ ಪಾಸ್ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.
ಸಮತಾ ಪಾರ್ಟಿ ಮಾಜಿ ಮುಖ್ಯಸ್ಥೆ ಜಯಾ ಜೇಟ್ಲಿ ನೇತೃತ್ವದಲ್ಲಿ ರಚಿಸಲಾಗಿದ್ದ ಕಾರ್ಯಪಡೆಯ ಶಿಫಾರಸುಗಳನ್ನು ಆಧರಿಸಿ ಹೊಸ ಕಾಯ್ದೆ ರಚನೆಗೆ ಮುಂದಾಗಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರ ಯುವತಿಯರ ಮದುವೆ ವಯಸ್ಸು ಹೆಚ್ಚಿಸಲು ಪ್ರಮುಖ ಕಾರಣಗಳೇನು ಅನ್ನೋದನ್ನ ನೋಡೋದಾದ್ರೆ..
21 ವರ್ಷಕ್ಕೆ ಕಂಕಣಭಾಗ್ಯ
ಯುವಕ ಹಾಗೂ ಯುವತಿಯರ ಮಧ್ಯೆ ಸಮಾನತೆ ಸಾಧಿಸುವುದು. ಯುವತಿಯರ ಶೈಕ್ಷಣಿಕ ಸಾಧನೆಗೆ ಹೆಚ್ಚಿನ ಅವಕಾಶ ಕಲ್ಪಿಸುವುದು. ಹೆರಿಗೆ ವೇಳೆ ತಾಯಿ, ನವಜಾತ ಶಿಶುವಿನ ಮರಣಪ್ರಮಾಣ ತಗ್ಗಿಸುವುದು. ಹಾಗೂ ಹೆಣ್ಣು ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಡೆಯುವ ಉದ್ದೇಶದಿಂದ ಹೊಸ ಕಾಯ್ದೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರದ ಪ್ರಸ್ತಾವಿತ ಕಾಯ್ದೆ ಬಗ್ಗೆ ದೇಶಾದ್ಯಂತ ಚರ್ಚೆ ಆರಂಭವಾಗಿದೆ. ಕೆಲವರು ಕೇಂದ್ರದ ಕ್ರಮವನ್ನು ಸ್ವಾಗತಿಸಿದ್ರೆ ಇನ್ನು ಕೆಲವರು ಟೀಕಿಸಿದ್ದಾರೆ. ಈ ಮಧ್ಯೆ ಸಮಾಜವಾದಿ ಪಕ್ಷದ ಸಂಸದ ಎಸ್.ಟಿ ಹಸನ್, ಹುಡುಗಿಯರು 16 ವರ್ಷಕ್ಕೆ ಮದುವೆಯಾದ್ರೂ ತಪ್ಪಿಲ್ಲ ಅಂತಾ ಹೇಳಿ ವಿವಾದ ಸೃಷ್ಟಿಸಿದ್ದಾರೆ.
ಹುಡುಗಿ ವಯಸ್ಸಿಗೆ ಬಂದಿದ್ರೆ 16 ವರ್ಷಕ್ಕೆ ಮದುವೆಯಾದ್ರೂ ತಪ್ಪಿಲ್ಲ. 18ನೇ ವಯಸ್ಸಿನಲ್ಲಿ ಹುಡುಗಿಯರು ಮತ ಚಲಾಯಿಸಬಹುದಾದರೆ ಮದುವೆ ಯಾಕಾಗಬಾರದು? ನಾನು ಈ ಮಸೂದೆಯನ್ನು ಬೆಂಬಲಿಸೋದಿಲ್ಲ.
ಎಸ್.ಟಿ ಹಸನ್, ಸಮಾಜವಾದಿ ಪಕ್ಷದ ಸಂಸದ ಮಾಜವಾದಿ ಪಕ್ಷದ ಮತ್ತೊಬ್ಬ ಸಂಸದ ಶಫಿಕರ್ ರಹಮಾನ್ ಕೂಡ ಇದೇ ರೀತಿಯಾದ ಹೇಳಿಕೆ ನೀಡಿದ್ದು, ಭಾರತ ಬಡದೇಶ. ಹೀಗಾಗಿ ಇಲ್ಲಿ ಮಗಳ ಮದುವೆಯನ್ನು ಬೇಗ ಮಾಡಲು ಬಯಸುತ್ತಾರೆ. ಮಸೂದೆಗೆ ನನ್ನ ಬೆಂಬಲವಿಲ್ಲ ಎಂದಿದ್ದಾರೆ. ಆದರೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಾತ್ರ, ಸಂಸದರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಅಂತಾ ಹೇಳಿ ಮುಜುಗರದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಸಂಸದೆಯಾಗಿರೋ ಜಯಾಬಚ್ಚನ್ ಮಾತ್ರ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದು, ಈ ನಿರ್ಧಾರದಿಂದಾಗಿ ಯುವತಿಯರು ಅವರ ಸ್ವಾತಂತ್ರ್ಯವನ್ನು ಅನುಭವಿಸಬಹುದು ಎಂದಿದ್ದಾರೆ. ಕೇಂದ್ರದ ಹೊಸ ಕಾಯ್ದೆ ಬಗ್ಗೆ ದೇಶದಲ್ಲಿ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಇದು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಕಾದುನೋಡಬೇಕಿದೆ.