ಆಗ ತಾನೇ ಮುಂಬಯಿಗೆ ಟ್ರಾನ್ಸ್ ಫರ್ ಆಗಿ ಬಂದಿರೋ ನಾವು ಇಲ್ಲಿಯ ಜನ,ವಾತಾವರಣ,ಆಚಾರ-ವಿಚಾರ ಹಾಗೂ ಆಹಾರದ ವಿಷಯದಲ್ಲಿ ಹೊಂದಾಣಿಕೆಯಾಗಲು ಸ್ವಲ್ಪ ಪ್ರಯಾಸವೇ ಪಡಬೇಕಾಯಿತು.ಮನುಷ್ಯ ಎಲ್ಲಾದಕ್ಕೂ ಹೇಗಾದ್ರೂ ಹೊಂದ್ಕೋಬಹುದು ಆದ್ರೆ ಆಹಾರದ ವಿಷ್ಯದಲ್ಲಿ ಮಾತ್ರ ಸ್ವಲ್ಪ ಕಷ್ಟ ಕಣ್ರಿ ಅಂತ ನಂಗೆ ಮೊದಮೊದಲು ಅನ್ನಿಸಿದ್ದಂತೂ ನಿಜನೇ ! ಆದ್ರೂ ನಂಗೇನು?ನಮ್ಮನೆಯಲ್ಲಿ ತಾನೇ ನಾವು ಮಾಡೋದು ತಿನ್ನೋದು,ಅವ್ರಿವ್ರ ಆಹಾರ ಶೈಲಿ ಕಟ್ಟಿಕೊಂಡು ನಂಗೇನು ಮಾಡೋದಿದೆ ಅಂತ ತಕ್ಕ ಮಟ್ಟಿಗೇನೋ ನಾನು ಸುಮ್ಮನಿದ್ದೆ!ಆದ್ರೆ ಆ ನನ್ನ ನೆಮ್ಮದಿ ಸಮಸ್ಯೆಯಾಗಿ ಬದಲಾಗೋ ದಿನ ಹತ್ತಿರದಲ್ಲೇ ಬಂತು….
ಒಂದು ದಿನ ಇದ್ದಕ್ಕಿದ್ದಂತೆ ಸ್ಕೂಲ್ ನಿಂದ ಬಂದದ್ದೇ ತಡ ನನ್ನ ಮಗ ಅಮ್ಮ ನಾಳೆಯಿಂದ ಸ್ಕೂಲ್ ಗೆ ಚಪಾತಿ ಭಾಜಿ ತರ್ಬೇಕಂತೆ ಟೀಚರ್ ಅಂದಿದ್ದಾರೆ ಎಂದಾಗಲೇ ನನ್ನ ಎದೆ ಧಸಕ್ಕೆಂದಿತು.ಯಾಕಂದ್ರೆ ನನ್ನ ಅಡುಗೆ ಕೋಣೆಯ ಸಾಮ್ರಾಜ್ಯದಲ್ಲಿ ತೀರಾ ಕೆಟ್ಟದಾಗಿ ಮೂಡಿ ಬರೋ ತಿಂಡಿಯೇ ಈ ಚಪಾತಿಯಾಗಿತ್ತು.ಊರಲ್ಲಿ ತಿಂಗಳಲ್ಲಿ ಒಂದೋ ಎರಡೊ ಬಾರಿ ಮಾಡಿ ತಿನ್ನುತ್ತಿದ್ದ ಚಪಾತಿ ಪ್ರಪಂಚದ ಎಲ್ಲಾ ಖಂಡಗಳ ಪೂರ್ಣ ಮಾಹಿತಿ ನೀಡೊ ವಸ್ತುವಾಗಿ ಮೂಡಿ ಬರುತ್ತಿತ್ತು.ಇನ್ನೂ ಸ್ಕೂಲ್ ನಲ್ಲಿ ಬೇರೆ ಇದಕ್ಕಿಂತ ಉತ್ತಮ ನಿದರ್ಶನ ಯಾವುದೂ ಟೀಚರ್ ಗೆ ಸಿಗಲಾರದು ಎಂದು ನನ್ನನ್ನೇ ನಾನು ಶಪಿಸುತ್ತಾ ಮರುದಿನ ಮಾಡಲಿರೋ ಚಪಾತಿ ಬಗ್ಗೆ ನೆನೆಯುತ್ತಾ ಕೂತೆ.
ಇಲ್ಲಿನ ಜನರೋ ಮೂರೂ ಹೊತ್ತೂ ಚಪಾತಿ ಭಾಜೀ,ರೋಟಿಭಾಜೀ,ಚಪಾತಿ ಸಬ್ಜಿ,ರೋಟಿ ಸಬ್ಜಿ ಅಂತ ಅಲವತ್ತು ಕೊಳ್ಳುತ್ತಾರೆ.ಯಾವಾಗ ನೋಡಿದಲ್ಲಿ ಅಡುಗೆ ಕೋಣೆಯಲ್ಲೇ ಉಳಿಯೋ ಮಂದಿ,ಇವರುಗಳಿಗೆ ಇವುಗಳಿಂದ ಮುಕ್ತಿ ಎಂತು?ಇನ್ನು 25 ದಿನಗಳಿಗೊಮ್ಮೆ ಠಣ್ ಎಂಬ ಸಿಲಿಂಡರ್ ನ ಶಬ್ದ ಕಿವಿಗಪ್ಪಳಿಸುತ್ತಲೇ ನಮಗೆ ನಮ್ಮ ನೆಚ್ಚಿನ ಪ್ರಧಾನಿಯವರ ಸಬ್ಸಿಡಿ ಯೋಜನೆಯನ್ನು ನೆನೆಪಿಸುತ್ತದೆ.ಈ ಪಾಟಿ ಚಪಾತಿ ತಿಂದ್ರೆ ಸಿಲಿಂಡರ್ ತನ್ನ ನಿಜ ಸ್ವರೂಪ ಬೇಗನೆ ತೋರದಿರುತ್ತದೆಯೇ??ಅಷ್ಟರಲ್ಲಾಗಲೇ ಎಲ್ಲಿಂದಲೋ ಬಂದ ಚಪಾತಿ ಯ ಸುಮಧುರ ವಾಸನೆ ಬಂದು ನನ್ನ ಮೂಗಿಗೆ ಬಡಿಯುತ್ತಿದ್ದಂತೆ,ನನಗೆ ನಾಳಿನ ಚಪಾತಿ ತಯಾರಿಯ ಬಗ್ಗೆ ಥಟ್ಟನೆ ನೆನಪಾಯ್ತು.ಇವರ ಚಪಾತಿ ರಹಸ್ಯ ಹೇಗೆ ಕೇಳುವುದಪ್ಪಾ ಎಂದು ಹೇಗೋ ಧೈರ್ಯ ಮಾಡಿ ಕೇಳಿಯೇ ಬಿಟ್ಟೆ ಅಷ್ಟಕ್ಕೆ ಆಕೆ ನಕ್ಕು,ಆಪ್ ಸೌತ್ ಕೇ ಲೋಗ್ ತೋ ಹಮೇಶಾ ಡೋಸಾ ಹೀ ಖಾತೇ ಹೈ ಅಂದು ಬಿಡಬೇಕೆ?ನಮ್ಮ ಕರ್ನಾಟಕದ ತಿಂಡಿಯ ಬಗ್ಗೆ ಅಪಹಾಸ್ಯ ಮಾಡಿದ್ದಕ್ಕೆ ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ ಎಂದು ಬರುತ್ತಿದ್ದ ಕೋಪನ ಅಲ್ಲಿಗೆ ತಡೆಹಿಡಿಯುತ್ತಾ ಸುಮ್ಮನಾದೆ.
ಆಕೆ ಹೇಳಿಕೊಟ್ಟಂತೆಯೇ ನಾನು ಮಾಡಿ ನೋಡಿದೆ.ಆಶ್ಚರ್ಯವೆಂಬಂತೆ ಮೊದಲ ಬಾರಿಗೆ ಚೆನ್ನಾಗಿ ಮೂಡಿ ಬಂತು.ಹೆಮ್ಮೆಪಟ್ಟೆ.ಅಷ್ಟೇ ಸಾಕು ಎಂಬಂತೆ ಹಲವು ವಿಧದಲ್ಲಿ ಗೋಧಿ ಹಿಟ್ಟಿನ ತಿಂಡಿಗಳನ್ನೆಲ್ಲಾ ಕಲಿತು ಸಂಪೂರ್ಣ ನನ್ನ ಅಡುಗೆ ಮನೆಯನ್ನೇ ಜಾಲಾಡಿಸಿಬಿಟ್ಟೆ.ಈಗ ಎಲ್ಲಾ ಬಗೆಯ ತಿಂಡಿಗೂ ನಾವು ಸೈ.ಚಪಾತಿಯಿಂದ ಆರಂಭಿಸಿ ಪಿಜ್ಜಾ,ಛೋಲೆ ಬಟೂರಾ,ರೋಟಿ,ಪ್ರಾಂಕಿ ಹೀಗೆ ಹತ್ತು ಹಲವಾರು ತಿಂಡಿಗಳು.ಆದ್ರೆ ಇವುಗಳಲ್ಲೆಲ್ಲಾ ನಾನು ಗಮನಿಸಿದ ಮುಖ್ಯ ಅಂಶ ಏನಂದ್ರೆ ಮಾಡೊ ವಿಧಾನಗಳು ಬೇರೆ ಬೇರೆಯಾದ್ರೂ ನಾವು ಉಪ್ಯೋಗಿಸೊ ಸಾಮಗ್ರಿಗಳು ಹೆಚ್ಚುಕಡಿಮೆ ಒಂದೆ ಎಂಬುದಾಗಿ.ಚಪಾತಿ ಹಿಟ್ಟಿಗೆ ಎಣ್ಣೆ ಸ್ವಲ್ಪ ಜಾಸ್ತಿ ಹಾಕಿದ್ರೆ ಅದು ಬಟೂರಾ ಆಗತ್ತೆ ಕಡಿಮೆ ಹಾಕಿದ್ರೆ ಅದನ್ನ ಪೂರಿ ಮಾಡಬಹುದು,ಎಣ್ಣೆನೇ ಹಾಕದೇ ಡ್ರೈ ಚಪಾತಿ ಮಾಡಿ ಇಲ್ಲವಾದಲ್ಲಿ ಬಗೆ ಬಗೆ ತರಕಾರಿಗಳ ಫಿಲ್ಲಿಂಗ್ಸ್ ನಿಂದ ಪರಾಠಾ, ಅದನ್ನೇ ಟ್ವಿಸ್ಟ್ ಆಂಡ್ ಟರ್ನ್ ಮಾಡಿ ಅದ್ರೊಳಗೆ ಸ್ವಲ್ಪ ವೆಜ್ಜಿ ಸೇರಿಸಿದಲ್ಲಿ ಅದು ಫ್ರಾಂಕಿಯಾಗಿ ರೂಪುಗೊಳ್ಳುತ್ತೆ ಹೀಗೆ ನಾನಾ ತರಹ…
ಇನ್ನೂ ಸಬ್ಜಿ ಭಾಜಿ ವಿಶ್ಯಕ್ಕೆ ಬಂದ್ರೆ ಮುಗೀತು..ಇಲ್ಲಿನವರ ಕಾಮನ್ ವಿಷ್ಯ ಎಲ್ಲಾದಕ್ಕೂ ಕಾಂದಾ,ಲಸೂನ್ ಅದ್ರಕ್ ಅಂತಾರೆ ಅಂದಲ್ಲಿ ಎಲ್ಲಾದಕ್ಕೂ ಬೆಳ್ಳುಳ್ಳಿ ಶುಂಠಿ ಲೇಪನ ಹಾಗೂ ಗ್ರೇವಿ ದಪ್ಪಗಾಗಲು ಎಲ್ಲಾ ಗುಜರಾಥಿ,ಪಂಜಾಬಿ,ಮಹಾರಾಷ್ಟ್ರೀಯರು ಆಲೂ,ಟೊಮ್ಯಾಟೋ ಉಪ್ಯೋಗ ಮಾಡುತ್ತಾರೆ.ಅಲೂ ರಸವನ್ನು ದಪ್ಪಗಾಗಿಸಿ,ಟೊಮ್ಯಾಟೋ ಹುಳಿರುಚಿಯನ್ನೀಯುತ್ತದೆ.ಅದಕ್ಕೆ ಕೊಲ್ಲಾಪುರದ ಮಿಸಾಲ್ ಪಾವ್ ಗೂ ಮುಂಬಯಿಯ ಪಾವ್ ಭಾಜಿಗೂ ಪಂಜಾಬ್ ನ ಛೋಲೆ ಮಸಾಲಾಗೂ ಬಹಳಷ್ಟು ಹೋಲಿಕೆ ಯಿದೆ.ಮಾಡೋವಿಧಾನ ಸ್ವಲ್ಪಬೇರೆ,ರುಚಿನೂ ಬೇರೆ ಆದ್ರೆ ಉಪಯೋಗಿಸೋ ಸಾಮಗ್ರಿ ಸ್ವಲ್ಪ ಹೆಚ್ಚು ಕಡಿಮೆ ಅಷ್ಟೇ…ಅದಕ್ಕೆ ಉತ್ತರ ಭಾರತದ ಮಾರುಕಟ್ಟೆಗಳಲ್ಲಿ ಎನೀ ಟೈಮ್ ನೀರುಳ್ಳಿ,ಟೊಮ್ಯಾಟೋ,ಬೆಳ್ಳುಳ್ಳಿ,ಆಲೂಗಡ್ಡೇ ಇವಕ್ಕೆಲ್ಲಾ ಸಿಕ್ಕಾಪಟ್ಟೆ ಡಿಮ್ಯಾಂಡಪ್ಪೋ ಡಿಮ್ಯಾಂಡ್.ಇನ್ನೂ ಎಲ್ಲಾ ಹೋಟೇಲುಗಳಲ್ಲೂ ಇವುಗಳನ್ನು ತಯಾರಿಸುವುದರಿಂದ ಎಲ್ಲಾ ಮಾರುಕಟ್ಟೆಗಳಲ್ಲೂ ಇವುಗಳಿಗೆ ಭಾರೀ ಬೇಡಿಕೆ.
ಇಷ್ಟೇ ಕಣ್ರಿ ಅಡುಗೆ ಅಂದ್ರೆ ಇದ್ಯಾವ ಬ್ರಹ್ಮ ವಿದ್ಯೆನೂ ಅಲ್ಲ,ಇಂಗು ಇದ್ರೆ ಮಂಗನೂ ಚೆನ್ನಾಗಿ ಅಡುಗೆ ಮಾಡ್ತಾನಂತೆ ಎಂದು ಹಿರಿಯರು ಹೇಳ್ತಾರೆ,ಹಾಗೆ!ಅಡುಗೆಯಲ್ಲಿ ನಾವು ಮುಖ್ಯವಾಗಿ ಬೇಸಿಕ್ ವಿಷ್ಯಗಳನ್ನು ತಿಳಕೊಂಡ್ರೆ ಅದೇ ಸಾಮಗ್ರಿಗಳಿಂದ ತರಹೇವಾರಿ ಅಡುಗೆ ಮಾಡಬಹುದು.ಇಟ್ಸ್ ಜಸ್ಟ್ ಎ ಟ್ವಿಸ್ಟ್ ಆಂಡ್ ಟರ್ನ್ ಕಣ್ರಿ! …ಯಾವ ಇಂಟರ್ನೆಟ್ ನಿಂದಲೂ ಬ್ಲೈಂಡ್ ಆಗಿ ಕಾಪಿ ಮಾಡೋ ಅಗತ್ಯನೂ ಇಲ್ಲ ಇನ್ನೊಬ್ರ ಬಳಿ ರೆಸಿಪಿಗಾಗಿ ಕಾಲು ಹಿಡಿಯೋ ಪ್ರಸಂಗನೂ ಇಲ್ಲ.
ಮುಖ್ಯವಾಗಿ ಅಡುಗೆಯಲ್ಲುಪಯೋಗಿಸುವ ವಸ್ತುಗಳ ಪರಿಣಾಮಗಳನ್ನು ತಿಳಿದುಕೊಂಡು ಹಾಗೂ ಯಾವುದೇ ಒಂದು ರೆಸಿಪಿಯ ಕಾನ್ಸೆಪ್ಟ್ ನ್ನು ಮನದಲ್ಲಿ ಚಿತ್ರಿಸಿ ನಿಮ್ಮ ಯೋಚನೆಯನ್ನು ಬದಲಾಯಿಸುತ್ತಾ ಹೋಗಿ ಅದಕ್ಕೊಂದು ಸುಂದರ ರೂಪು ನೀಡಿದಾಗ,ಅಲ್ಲೊಂದು ಸವಿಯಾದ ರೆಸಿಪಿ ಸೃಷ್ಟಿಯಾಗುತ್ತದೆ.ನಿಮ್ಮ ಅಡುಗೆ ಆಗ ಯಾವ ನಳ ಮಹಾರಾಜನ ನಳಪಾಕಕ್ಕೂ ಕಡಿಮೆ ಇರಲ್ಲ ನೋಡಿ.ಇದೇ ಅಡುಗೆಯ ಸ್ಪೆಷಾಲಿಟಿ!
ಎಲ್ಲಾರೂ ಹೋಟೆಲ್ ಪಾರ್ಟಿ ಇಷ್ಟ ಪಡೋದು ಇದಕ್ಕೇನೆ.ಅಲ್ಲಿ ಇಂತಹುದೇ ರೆಸಿಪಿನ ಹಲವು ಬಗೆಯ ಹೆಸರನ್ನು ನೀಡಿ ಬಳಸುತ್ತಾರೆ.ದೊಡ್ದದಾಗಿ ಟುಡೇಸ್ ಸ್ಪೆಷಲ್ ಅಂತ ಬೋರ್ಡ್ ಅದರಲ್ಲಿರೋ ಟ್ರಿಕ್ಸ್ ಇದೇ ನೋಡಿ.ಈ ಅಡುಗೆ ಬಗೆಗಿನ ಸಮಗ್ರ ಮಾಹಿತಿಯು ನೀವು ಸಂಜೀವ್ ಕಪೂರ್ ರ ಮಾಸ್ಟರ್ ಚೆಫ್ ಕಾರ್ಯಕ್ರಮ ನೋಡಿದ್ರೆ ನಿಮಗರಿವಾಗುತ್ತದೆ.ಅಲ್ಲಿ ಕ್ರಿಯೇಟಿವ್ ಥಿಂಕಿಂಗ್ ಇರೊವ್ರಿಗೇನೇ ಪ್ರಾಶಸ್ತ್ಯ.
ನೀವೇನೇ ಹೇಳಿ ಫ಼್ರೆಂಡ್ಸ್! ಕೊನೇಗೆ ಒಂದು ಮಾತು ಕಣ್ರಿ! ಎಂಧದ್ದೇ ತಿನ್ನಿ ಆದ್ರೆ ನಮ್ಮ ಹುಟ್ಟಿ ಬೆಳೆದ ನಾಡಿನ ಆಹಾರ ಅದೇ ನಮಗೆ ಅಮೃತ.ಅದ್ರಲ್ಲೂ ಅಮ್ಮನ ಕೈಯ ಹಲಸಿನಕಾಯಿರೊಟ್ಟಿ,ಕುಚ್ಚಿಲಕ್ಕಿ ರೊಟ್ಟಿ ಚಟ್ನಿ ಜೊತೆ ನೆಂಚ್ಕೊಂಡು ಮಾವಿನ ಕಾಯಿ ಉಪ್ಪಿನ ಕಾಯಿ ತಿಂದಲ್ಲಿ ಅದೇ ನಮಗೆ ಮೃಷ್ಟಾನ್ನ ಭೋಜನ ,ಇದಕ್ಕೆ ಸರಿಸಾಟಿ ಇನ್ನ್ಯಾವುದೂ ಇಲ್ಲ.
- ಸ್ವರ್ಣಲತ ಭಟ್
POPULAR STORIES :
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!