ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಹೀಗೆಲ್ಲಾ ಕರೆಯಲ್ಪಡುತ್ತಿರುವ ಬೆಂಗಳೂರು ಇದೀಗ ಪ್ರವಾಹ ಸಿಟಿಯಾಗಿ ಮಾರ್ಪಟ್ಟಿದೆ. ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಇತ್ತೀಚಿನ ದಿನಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದೆ. ಇನ್ನೂ ನಗರದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಯಿಂದ ನಗರದ ಪ್ರಮುಖ ಶಾಪಿಂಗ್ ರಸ್ತೆಗಳಾದ ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕೆಜಿ ರಸ್ತೆ, ಶಿವಾಜಿನಗರದ ರಸ್ತೆಗಳು ಪ್ರವಾಹದ ಪರಿಸ್ಥಿತಿಯಲ್ಲಿದೆ.
ಇನ್ನೂ ನಗರದಲ್ಲಿ ಸುರಿದ ಜೋರು ಮಳೆಗೆ ರಸ್ತೆಗಳು ಗುಂಡಿಗಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ನರಕಯಾತನೆ ಪಡುವಂತಾಗಿದೆ. ಅದರಂತೆ ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿಯ ಸುಲ್ತಾನಪೇಟೆಯಲ್ಲೂ ಮಳೆಯ ಅವಾಂತರದಿಂದ ಗಣೇಶ ಎಂಬಾತ ತೆರೆದ ಮ್ಯಾನ್ ಹೋಲ್ ಗೆ ಬಿದ್ದು ಜೀವಕಳೆದುಕೊಂಡಿದ್ದರು. ಈ ಹಿನ್ನೆಲೆ ಬಿಬಿಎಂಪಿ ಅವ್ಯವಸ್ಥೆ ವಿರುದ್ಧ ತಿರುಗಿಬಿದ್ದ ವರ್ತಕರು ಇಂದು ಪ್ರತಿಭಟನೆ ನಡೆಸಿದ್ದು,
ರಸ್ತೆ, ಚರಂಡಿ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಮಳೆಬಂದಾಗ ರಸ್ತೆಗಳು
ಕೆರೆಯಂತಾಗುತ್ತದೆ. ಭಾರಿ ಮಳೆ ಹಾಗೂ ಕಳಪೆ ಮೂಲಸೌಕರ್ಯಗಳಿಂದಾಗಿ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ ಎಂದು ಚಿಕ್ಕಪೇಟೆ ವರ್ತಕರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.