ಬೆಂಗಳೂರು ವಾಸಕ್ಕೆ ಯೋಗ್ಯವಲ್ಲ ಎನ್ನುವ ಅಯೋಗ್ಯ ಜನರು ಬೆಂಗಳೂರಿಗೆ ಬರಬಾರದು ಎಂದು ಸಚಿವ ಮುನಿರತ್ನ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರನ್ನು ಬೈಯ್ಯುವ ಜನರು ತಿಂದ ತಟ್ಟೆಯಲ್ಲೇ ಹೇಸಿಗೆ ಮಾಡುತ್ತಾರೆ ಎನ್ನುವ ಗಾದೆ ರೀತಿಯೇ ಮಾಡುತ್ತಿದ್ದಾರೆ. ಅದೇ ರೀತಿ ಬೆಂಗಳೂರನ್ನು ತೆಗಳುವವರು ನೀಚ ಸಂಸ್ಕೃತಿಗೆ ಸೇರುತ್ತಾರೆ. ಬೆಂಗಳೂರಲ್ಲೇ ಇದ್ದು, ಬೆಂಗಳೂರಿನ ಅನ್ನವನ್ನೇ ತಿಂದು, ನಂತರ ಬೆಂಗಳೂರಿಗೆ ಬೈಯ್ಯುತ್ತಿದ್ದಾರೆ. ಈ ರೀತಿಯಾಗಿ ಯಾರು ಬೈಯ್ಯುತ್ತಿದ್ದಾರೋ ಅವರಿಂದಲೇ ಬೆಂಗಳೂರು ಹಾಳಾಗಿದೆ ಎಂದು ಕಿಡಿಕಾರಿದರು. ಪ್ರಕೃತಿ ವಿಕೋಪಕ್ಕೆ ಯಾರೂ ಏನು ಮಾಡಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪ ಇಡೀ ಬೆಂಗಳೂರಲ್ಲಿ ಆಗಿಲ್ಲ. ಒಂದೆರಡು ಕಡೆಗಳಲ್ಲಿ ಹೆಚ್ಚಾಗಿ ನೆರೆ ಬಂದಿದೆ. ಈ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದಲ್ಲೆಲ್ಲ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದರು. ಒತ್ತುವರಿ ತೆರವುಗೊಳಿಸುವುದನ್ನು ಸರ್ಕಾರ ಮಾಡೇ ಮಾಡುತ್ತದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳ ಸ್ಪಷ್ಟವಾದ ಆದೇಶವನ್ನು ನೀಡಿದ್ದು, ರಾಜಕಾಲುವೆ ಹಾಗೂ ಕೆರೆಯನ್ನು ಒತ್ತುವರಿ ಮಾಡಿಕೊಂಡವರನ್ನು ತೆರವು ಮಾಡಬೇಕೆಂದು ತಿಳಿಸಿದ್ದಾರೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗಿದೆ ಎಂದು ಸಚಿವರು ಹೇಳಿದ್ದಾರೆ.
ಬೆಂಗಳೂರಿನ ಬಗ್ಗೆ ಟೀಕೆ ಮಾಡಿದ ಜನರಿಗೆ ತರಾಟೆಗೆ ತೆಗೆದುಕೊಂಡ ಸಚಿವ ಮುನಿರತ್ನ
Date: