ಬೆಂಗಳೂರು:- ಮಹಿಳೆಯೊಬ್ಬರು ತನ್ನ ಸಹೋದ್ಯೋಗಿಗಳನ್ನು ಬಿಟ್ಟು ಬರಲು ರಾತ್ರಿ 10 ಗಂಟೆ ಸಮಯದಲ್ಲಿ ಕಾರಿನಲ್ಲಿ ಹೊರಟಿದ್ದ ವೇಳೆ ಯುವಕರ ಗುಂಪೊಂದು ಕಾರನ್ನು ಅಡ್ಡಗಟ್ಟಿರುವ ಘಟನೆ ಜರುಗಿದೆ. ಏಕಾಏಕಿ ನಿಲ್ಲಿಸಿದ ಆರೋಪಿಗಳು ಹೇಳಿದ್ದು, ನೀವು ಇನ್ನೊಂದು ವಾಹನಕ್ಕೆ ಡಿಕ್ಕಿ ಮಾಡಿ ಬಂದಿದ್ದೀರಿ. ಹೀಗೆ ಹೋದರೆ ಹೇಗೆ ಎಂದು ಪ್ರಶ್ನಿಸಿತು. ಹಣ ಕೀಳುವ ಉದ್ದೇಶ ಅವರಲ್ಲಿ ಇತ್ತು. ಎಚ್ಚೆತ್ತುಕೊಂಡ ಮಹಿಳೆ ಧೈರ್ಯದಿಂದಲೇ ಎದುರಿಸಿ ಪೊಲೀಸರು ಹಾಗೂ ಮನೆಯವರ ಜತೆಗೆ, ಪರಿಚಯಸ್ಥರಿಗೆ ಅಲ್ಲಿಂದ ಕರೆ ಮಾಡಿದರು. ಇದನ್ನು ಕಂಡ ಆ ತಂಡ ಅಲ್ಲಿಂದ ಕಾಲ್ಕಿತ್ತಿತು.
ಇದು ನಡೆದಿರುವುದು ಸರ್ಜಾಪುರದ ಮುಖ್ಯ ರಸ್ತೆಯಲ್ಲಿ. ಪೊಲೀಸರು ವಿವರವನ್ನು ಪಡೆದುಕೊಂಡು ಯುವಕರ ತಂಡದ ಪತ್ತೆಗೆ ಮುಂದಾಗಿದ್ಧಾರೆ. ಮಹಿಳೆಯ ಪತಿ ಎಕ್ಸ್ನಲ್ಲಿ ಈ ಅನುಭವ ಪೋಸ್ಟ್ ಮಾಡಿದ್ದು, ಇದಕ್ಕೆ ಹಲವರು ಗಂಭೀರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಉದ್ಯೋಗಿ ಸೃಜನ್ ಶೆಟ್ಟಿ ಎಂಬುವವರ ಪತ್ನಿ ಕೆಲಸ ಮುಗಿಸಿ ಹೊರಡುವಾಗಲೇ ತಡವಾಗಿತ್ತು. ಈ ವೇಳೆ ಜತೆಗಿದ್ದ ಇಬ್ಬರು ಮಹಿಳಾ ಹಾಗು ಪುರುಷ ಸಿಬ್ಬಂದಿಗೂ ರಾತ್ರಿಯಾಗಿದ್ದರಿಂದ ಕ್ಯಾಬ್ ಸಿಗುವುದು ಕಷ್ಟವಾಗಿತ್ತು.
ಇದರಿಂದ ನಾನೇ ಬಿಟ್ಟು ಬರುವುದಾಗಿ ಅವರು ಕಾರಿನಲ್ಲಿ ಹೊರಟರು. ಸ್ವಲ್ಪ ದೂರದಲ್ಲಿಯೇ ಯುವಕರ ಗುಂಪು ಕಾರಿನಲ್ಲಿ ಹಿಂಬಾಲಿಸುತ್ತಿತ್ತು. ಇದನ್ನು ಗಮನಿಸಿದ ಮಹಿಳೆ ಅಲರ್ಟ್ ಆದರು. ಮುಖ್ಯ ರಸ್ತೆ ಬಿಟ್ಟು ಬೇರೆಲ್ಲೂ ಕಾರು ತಿರುಗಿಸಲಿಲ್ಲ. ಅವರೂ ಹಿಂಬಾಲಿಸಿದರು. ಏಳೆಂಟು ಕಿ.ಮಿ ದೂರ ಸಾಗಿದ ನಂತರವೂ ಅವರು ಹಿಂಬಾಲಿಸಿಕೊಂಡು ಬಂದು ಕಾರು ನಿಲ್ಲಿಸುವಂತೆ ಹೇಳಿದರು. ನೀವು ಅಪಘಾತ ಮಾಡಿ ಬಂದಿದ್ದೀರಿ. ವಾಹನಕ್ಕೆ ಡಿಕ್ಕಿ ಹೊಡೆದು ಬಂದರೆ ಹೇಗೆ ಎಂದು ಯುವಕರ ಗುಂಪು ವರಾತ ತೆಗೆಯಿತು.
ಅದರ ರಿಪೇರಿ ಖರ್ಚು ಇಷ್ಟಾಗುತ್ತದೆ ಎಂದು ಹಣ ಕೀಳುವ ಮುನ್ಸೂಚನೆಯನ್ನೂ ನೀಡಿತು. ಕಾರಿನಿಂದ ಕೆಳಕ್ಕೆ ಇಳಿಯುವಂತೆ ತಿಳಿಸಿದರೂ ಮಹಿಳೆ ಮಾತ್ರ ಧೃತಿಗೆಡಲಿಲ್ಲ. ಜತೆಯಲ್ಲಿ ಇದ್ದ ಇನ್ನೂ ಮೂವರ ಸಹಕಾರದಿಂದ ಎದುರಿಸಲು ಪ್ರಯತ್ನಿಸಿದರು. ಅಲ್ಲಿಂದಲೇ ಪೊಲೀಸರಿಗೂ ಕರೆ ಮಾಡಿದರು. ಮನೆಯವರಿಗೂ ತಿಳಿಸಿ ಪರಿಚಯಸ್ಥರಿಗೆ ಕೂಡಲೇ ಬರುವಂತೆ ಹೇಳಿದರು. ಇವರ ಮನೋಧೈರ್ಯ ಕಂಡ ಯುವಕರ ದಂಡು ಅಲ್ಲಿಂದ ಕಾಲ್ಕಿತ್ತಿತ್ತು. 20 ನಿಮಿಷದೊಳಗೆ ಪೊಲೀಸರೂ ಅಲ್ಲಿಗೆ ಬಂದರು. ಒಂದಿಬ್ಬರು ಸ್ನೇಹಿತರೂ ಬಂದರು. ಅಲ್ಲಿ ನಡೆದ ಘಟನೆಯನ್ನು ಮಹಿಳೆ ಪೊಲೀಸರಿಗೆ ವಿವರಿಸಿದರು.