ಬೆಂಗಳೂರು: ದೊಡ್ಡ ದೊಡ್ಡ ಬಂಗಲೆಗಳನ್ನೇ ಟಾರ್ಗೆಟ್ ಮಾಡಿ ಕೆಜಿ ಕೆಜಿ ಚಿನ್ನ ದೋಚುತ್ತಿದ್ದ ಖತರ್ನಾಕ್ ಕಳ್ಳನನ್ನು ಗೋವಿಂದರಾಜನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಬೆಂಗಳೂರಿನ ಸೆಲೆಬ್ರಿಟಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಅರೆಸ್ಟ್ ಆಗಿದ್ದಾನೆ. ಆರೋಪಿ ಬಳಿಯಿಂದ ಬರೋಬ್ಬರಿ 1 ಕೆಜಿ 200 ಗ್ರಾಂ ಕದ್ದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ವಿರುದ್ಧ ಬೆಂಗಳೂರಿನಲ್ಲಿ 83 ಕ್ಕೂ ಹೆಚ್ಚು ಮನೆಗಳ್ಳತನ ಕೇಸ್ಗಳಿವೆ. ನಗರ ಮಾತ್ರವಲ್ಲದೆ ಕರ್ನಾಟಕದ ಬೇರೆ ಭಾಗಗಳಲ್ಲಿಯೂ ಕಳ್ಳತನದ ಆರೋಪವಿದ. ಕಾರ್ತಿಕ್ ಮನೆಯೊಂದರಲ್ಲಿ ಮುಕ್ಕಾಲು ಕೆಜಿ ಚಿನ್ನವನ್ನು ಕದ್ದು ತನ್ನ ಗರ್ಲ್ಫ್ರೆಂಡ್ ಜೊತೆ ಗೋವಾದ ಕ್ಯಸಿನೋಗೆ ಹೊರಟಿದ್ದ. ಆದರೆ ರೈಲು ತಡವಾಗಿದ್ದರಿಂದ ಕದ್ದಿದ್ದ ಚಿನ್ನವನ್ನು ಅಡವಿಡಲಾಗದೇ ಖತರ್ನಾಕ್ ಪ್ಲ್ಯಾನ್ ಮಾಡಿ ಕೊಳಚೆ ಪ್ರದೇಶದಲ್ಲಿ ಹೂತಿಟ್ಟು ಎಸ್ಕೇಪ್ ಆಗಿದ್ದ.
ಓಕಳಿಪುರಂನಲ್ಲಿ ರೈಲ್ವೆ ಕಾಲೋನಿಯಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಕಾರ್ತಿಕ್ ಯಾರೂ ಓಡಾಡದ ಕೊಳಚೆ ಜಾಗದಲ್ಲಿ 2 ಅಡಿ ಗುಂಡಿ ತೆಗೆದು ಕದ್ದ ಚಿನ್ನವನ್ನು ಹೂತಿಟ್ಟಿದ್ದ. ಗುಂಡಿ ತೆಗೆದ ಜಾಗದಲ್ಲಿ ಗುರುತಿಗೆ ಮೇಲೆ ಕಲ್ಲೊಂದನ್ನು ಇಟ್ಟಿದ್ದ. ಬಳಿಕ ಗರ್ಲ್ಫ್ರೆಂಡ್ ಜೊತೆ ಗೋವಾಕ್ಕೆ ಹೋಗಿದ್ದ.
ಕೆಲ ದಿನಗಳ ಹಿಂದೆ ಗೋವಾದ ಕ್ಯಸಿನೋದಲ್ಲಿ ಗೆಳತಿಯ ಜೊತೆ ಸಿಕ್ಕಿಬಿದ್ದಿದ್ದ ಆರೋಪಿ ಕದ್ದ ಚಿನ್ನ ಎಲ್ಲಿಟ್ಟಿದ್ದ ಎಂಬುದನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಚಿನ್ನವನ್ನು ಹೂತಿಟ್ಟಿದ್ದ ಜಾಗ ಕಂಡು ಪೊಲೀಸರೇ ದಂಗಾಗಿದ್ದಾರೆ. ಮುಕ್ಕಾಲು ಕೆಜಿ ಚಿನ್ನವನ್ನು ಮಣ್ಣಿನಿಂದ ಕಾರ್ತಿಕ್ ಹೊರಗೆ ತೆಗೆದು ಗೋವಿಂದರಾಜನಗರ ಪೊಲೀಸರ ಕೈಗೆ ಕೊಟ್ಟಿದ್ದಾನೆ.