ಬೆಂಗಳೂರು: ಪ್ರತಿಷ್ಠಿತ ಹೊಟೆಲ್ ನಲ್ಲಿ ಊಟ ಮಾಡುವಾಗ ಸಿಕ್ಕಿದ ಜಿರಳೆಯನ್ನು ಕಂಡು ಹೈಕೋರ್ಟ್ ವಕೀಲೆ ಬೆಚ್ಚಿಬಿದ್ದಿದ್ದಾರೆ. ಹೌದು ಊಟ ಮಾಡುವಾಗ ಹೈಕೋರ್ಟ್ ವಕೀಲೆಗೆ ಜಿರಳೆ ಸಿಕ್ಕಿದೆ. ನಿನ್ನೆ ಸಂಜೆ ನಡೆದ ಘಟನೆ ಇದಾಗಿದೆ. ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಕಳೆದ ದಿನ ಸಂಜೆ ಹೈಕೋರ್ಟ್ ವಕೀಲೆ ದಿ ಕ್ಯಾಪಿಟಲ್ ಹೋಟೆಲ್‌ಗೆ ಊಟಕ್ಕಾಗಿ ಹೋಗಿದ್ದರು. ಈ ವೇಳೆ ಪನ್ನೀರ್ ಗ್ರೇವಿಯನ್ನು ಆರ್ಡರ್ ಮಾಡಿದ್ದರು.
ಆದರೆ ಇದನ್ನು ಸೇವಿಸುವಾಗ ಅವರಿಗೆ ಜಿರಳೆ ಕಂಡು ಬಂದಿದೆ. ಇದರಿಂದ ವಕೀಲೆ ಬೆಚ್ಚಿಬಿದ್ದಿದ್ದಾರೆ. ಹೈಕೋರ್ಟ್ ವಕೀಲೆ ಶೀಲಾ ಅವರಿಗೆ ಪ್ರತಿಷ್ಠಿತ ಹೋಟೆಲ್ ಊಟದಲ್ಲಿ ಜಿರಳೆ ಕಂಡುಬಂದಿದೆ. ಈ ವೇಳೆ ಕೋಪಗೊಂಡ ಅವರು ಹೋಟೆಲ್ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದಾರೆ. ಆಗ ಸಿಬ್ಬಂದಿ ಉಡಾಫೆ ಮಾತನಾಡಿ ಬೇರೆ ಊಟ ಕೊಡುವುದಾಗಿ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಶೀಲಾ ಅವರು ನೇರ ಹೋಟೆಲ್ ಕಿಚನ್‌ಗೆ ತೆರಳಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಹೋಟೆಲ್ ಕಿಚನ್‌ಗೆ ತೆರಳುತ್ತಿದ್ದಂತೆ ಶೀಲಾ ಅವರು ಮತ್ತೊಮ್ಮೆ ಶಾಕ್ ಆಗಿದ್ದಾರೆ. ಆ ಹೋಟೆಲ್ ಕಿಚನ್ ಅವಸ್ಥೆ ಕಂಡು ವಾಕರಿಕೆ ಉಂಟಾಗಿದೆ. ಕಿಚನ್ ಸಂಪೂರ್ಣ ಗಲೀಜು ತುಂಬಿಕೊಂಡಿತ್ತು. ಇದನ್ನು ಕಂಡು ರಸ್ತೆ ಬದಿ ಹೋಟೆಲ್‌ಗಳೇ ಲೇಸು ಎಂದು ಕಿರುಚಾಡಿದ್ದಾರೆ. ಜೊತೆಗೆ ಹೋಟೆಲ್ ಬಗ್ಗೆ ದೂರು ನೀಡಿದ್ದಾರೆ.
ಮತ್ತೊಂದು ವಿಚಾರ ಅಂದರೆ ವಕೀಲೆ ಶೀಲಾ ಅವರ ಕರೆ ಸ್ವೀಕರಿಸಿ ಮಾತನಾಡಿದ ಫುಡ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಕೂಡ ಉಡಾಫೆ ಮಾತನಾಡಿದ್ದಾರೆ. ಅವರು ಕೂಡ ಈ ಬಗ್ಗೆ ನಿರ್ಲಕ್ಷ್ಯ ತೋರಿ ಬೇಜವಬ್ದಾರಿತನದ ಮಾತುಗಳನ್ನಾಡಿದ್ದಾರೆ. ನಾಳೆ ಬಂದು ಪರಿಶೀಲಿಸು ವುದಾಗಿ ಹೇಳಿದ್ದಾರೆ. ಇದರಿಂದ ಸಿಡಿದ ಶೀಲಾ ಅವರು ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.