ಈ ಭೂಮಿ ತಾಯಿ, ಆ ಮಳೆರಾಯ ನಂಬಿದವರನ್ನು ಕೈಬಿಡೊದಿಲ್ಲವೆಂದು ನಮ್ಮ ತಂದೆ ಯಾವಾಗ್ಲೂ ಹೇಳ್ತಿದ್ರು. ಬರಗಾಲ ಬಂದಾಗ ಹೆಚ್ಚಾಗಿ ಬರಗಾಲದ ಕರಿನೆರೆಳು ಬೀಳುವುದು ಬಯಲು ಸೀಮೆಗಳಿಗೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯ ಸಂಗತಿ.. ನಮ್ಮದು ಕಡೂರು ತಾಲ್ಲೂಕಿನ ಬಯಲುಸೀಮೆಯ ಒಂದು ಪುಟ್ಟ ಗ್ರಾಮ. ಬಯಲು ಸೀಮೆಯಲ್ಲಿ 20 ಎಕ್ಕರೆ ಜಮೀನು ಇರುವುದು ಒಂದೇ ಮಲೆನಾಡು ನೀರಾವರಿ ಪ್ರದೇಶಗಳಲ್ಲಿ ಎರಡು-ಮೂರು ಎಕರೆ ಜಮೀನು ಇರುವುದು ಒಂದೇ. ನಮ್ಮದು 7 ಎಕ್ಕರೆ ಜಮೀನು ಅದರಲ್ಲಿ ನನ್ನ ತಂದೆ ಮತ್ತು ಚಿಕ್ಕಪ್ಪ ಜೊಳ, ರಾಗಿ, ಹೊಗೆಸೊಪ್ಪು, ಶೇಂಗಾ ಹೀಗೆ ಹತ್ತಾರು ಬೆಳೆಗಳನ್ನು ಬೆಳೆಯುತ್ತಿದ್ದರು ಆದರೆ ಪ್ರತೀ ಸಾರಿಯು ಮಳೆಯಾಗದ ಕಾರಣ ನಷ್ಟ ಅನುಭವಿಸುತ್ತಿದ್ದರು. ಆದರೂ ಸಹ ಧೃತಿಗೆಡದೆ ಸಾವಿರಾರು ರೂಪಾಯಿ ಸಾಲ ಮಾಡಿ ವಿಭಿನ್ನ ಬೆಳೆಗಳನ್ನು ಬೆಳೆಯಲು ಪ್ರಯತ್ನಿಸುತ್ತಿದ್ರು. ಅವರ ಕೆಲಸಕ್ಕೆ ತಾಯಿಯು ಸಂಪೂರ್ಣವಾಗಿ ಬೆಂಬಲ ನೀಡಿ ಹಗಲು ರಾತ್ರಿ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಳು. ಕುಟುಂಬದವರೇ ಹೊಲದಲ್ಲಿ ಕಷ್ಟಪಡುತ್ತಿದ್ದರು. ಏಕೆಂದರೆ ಸಾಲ ಮಾಡಿ ಹೊಲ ಹೂಳುತ್ತಿರುವುದು ಅಂತಹದರಲ್ಲಿ ಕೂಲಿಯವರಿಗೂ ಕೊಡಲು ಹಣವಿಲ್ಲದ ಪರಿಸ್ಥಿತಿ ಅದು. ಆದರೆ ಹೊಲ ಉಳುಮೆ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲವೆಂದು ಕೆಲ ಗ್ರಾಮಸ್ಥರು ನಗರಗಳಿಗೆ ಕೂಲಿಗೆಂದು ವಲಸೆ ಹೋದರು. ಕೆಲವೊಂದು ಬಾರಿ ಚಿಕ್ಕಪ್ಪ ಈ ಜಮೀನಿನ ಸಹವಾಸವೇ ಬೇಡ. ಇನ್ನು ಎಷ್ಟು ಅಂತ ಸಾಯೋಣ ಪಟ್ಟಣಕ್ಕೋಗಿ ಕೂಲಿ ಕೆಲಸನಾದ್ರೂ ಮಾಡಿ ಬದುಕ್ಬೋದು ಈ ಹಾಳಾದ ಬರಡು ಭೂಮಿಲಿ ಒಂದು ಹುಲುಕಡ್ಡೀ ಕೂಡ ಬೆಳೆಯೋಕಾಗೊಲ್ಲ ಅಂತ ಅದೆಷ್ಟೋ ಬಾರಿ ತನ್ನ ತಂದೆಯ ಬಳಿ ಅಳಲು ತೋಡಿಕೊಂಡಿದ್ದರು. ಆದರೆ ನನ್ನ ತಂದೆ ಮಾತ್ರ ಇದೇ ಜಮೀನಿನಲ್ಲೇ ನಾವು ಬದುಕಬೇಕು ಎಂದು ಹಠ ಹಿಡಿದು ಕಷ್ಟ ಸುಖ ಎನ್ನದೆ ಮುನ್ನುಗಿದರು.
ನಮ್ಮಜ್ಜ ಮೊದಲಿನಿಂದಲೂ ನಮ್ಮ ಜಮೀನಿನಲ್ಲಿ ನೀರು ಇದೆ. ಬೋರ್‍ವೆಲ್ ಕೊರೆಸಿದರೆ ನೀರು ಸಿಕ್ಕವುದು ಎಂದು ಹೇಳುತ್ತಲೆ ಇದ್ದರು ಆದರೆ ಹಣದ ಕೊರತೆಯಿಂದ ಅದರ ಕಡೆಗೆ ಮನಸ್ಸು ಮಾಡಿರಲಿಲ್ಲ. ಅಪ್ಪ ಈಗಾಗಲೇ ಸಾಲ ಮಾಡಿದ್ದೇವೆ ಅದರ ಜೊತೆಗೆ ಇದು ಒಂದು ಆಗಿಹೋಗಲಿ ಎಂದು ಬೊರ್ವೆಲ್ ಕೊರೆಸಲು ನಿರ್ಧರಿಸಿ ಹಣವನ್ನು ಸಾಲವಾಗಿ ಪಡೆದು ಕೆಲಸ ಆರಂಭಿಸಿದರು. ಪ್ರತಿಫಲವಾಗಿ ಆ ದೇವರು ನಮ್ಮ ಕೈಬಿಡಲಿಲ್ಲ ಅನ್ನೋದಕ್ಕೆ ಇದೊಂದು ಉತ್ತಮ ಉದಾಹರಣೆ. ಒಂದು ಇಂಚು ನೀರು ಸಿಕ್ಕಿದ್ದೇ ಮನೆಯವರಿಗೆಲ್ಲಾ ಸಂಭ್ರಮವೋ, ಸಂಭ್ರಮ. ಆದರೆ ಏಳು ಎಕ್ಕರೆ ಜಮೀನು ಒಂದೇ ಕಡೆ ಇರಲಿಲ್ಲ ನೀರು ಬಿದ್ದ ಜಮೀನು ಕೇವಲ ಮುಕ್ಕಾಲು ಎಕರೆ ಇತ್ತು ಅದರಲ್ಲಿ ತರಕಾರಿಯನ್ನು ಬೆಳೆಯಲು ಆರಂಭಿಸಿದರು ಇನ್ನುಳಿದ ಜಮೀನಿಗೆ ಜೋಳದಂತಹ ಬೆಳೆಯನ್ನು ಬೆಳೆಯುತ್ತಿದ್ದರು. ಮೊದ ಮೋದಲಿಗೆ ತರಕಾರಿ ಕೃಷಿಯ ಅನುಭವವಿಲ್ಲದಿದ್ದರಿಂದ ಸ್ವಲ್ಪ ನಷ್ಟವೂ ಆಯಿತು. ನಂತರ ಸತತ ಪ್ರಯತ್ನ ಮತ್ತು ತಮ್ಮ ಸಾಮರ್ಥವನ್ನೆಲ್ಲಾ ಜಮೀನಿನ ಮೇಲೆ ಹಾಕಿದರು. ನಂತರ ಕಾಯಕಕ್ಕೆ ತಕ್ಕ ಪ್ರತಿಫಲ ಸಿಕ್ಕಲು ಆರಂಭಿಸಿತು. ಅಪ್ಪನ ಮುಖದಲ್ಲೂ ಮಂದಹಾಸ ಮೂಡಿತು. ಉಳಿದ ಬೆಳೆಗಳಲ್ಲಿ ನಷ್ಟವಾದರೂ ಸಹ ತರಕಾರಿಯಲ್ಲಿ ಲಾಭವಾಗುತಿತ್ತು. ಅಂದು ನೀರು ಬೀಳದಿದ್ದರೆ ಅಪ್ಪ, ಚಿಕ್ಕಪ್ಪನೂ ಸಹ ನಗರಕ್ಕೆ ವಲಸೆ ಹೋಗುತ್ತಿದ್ದರೋ ಅಥವಾ ಸಾಲ ಹೆಚ್ಚಾಯಿತೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೋ ಗೊತ್ತಿಲ್ಲ. ಆದರೆ ಅವರ ಗಟ್ಟಿಯಾದ ಆತ್ಮವಿಶ್ವಾಸದಿಂದ ಎಲ್ಲಾ ಒಳ್ಳೆಯದೆ ಆಗಿದೆ.
ಸತತ ಮೂರ್ನಾಲ್ಕು ವರ್ಷಗಳ ನಂತರ ಜಮೀನಿನಲ್ಲಿಯೇ ಮೂರು ಸಾವಿರ ಮರಿಯನ್ನು ಸಾಕಬಹುದಾದ ಕೊಳಿ ಫಾರಂನ್ನು ತೆರೆದರು. ಕೋಳಿಗಳಿಗೆ ಬೇಕಾಗುವ ಕಂಪನಿಯ ಆಹಾರವನ್ನು ಸ್ವಲ್ಪ ತಂದು ಅದಕ್ಕೆ ನಾವೇ ಬೆಳೆಯುತ್ತಿದ ಜೋಳವನ್ನು ಜೋತೆಗೆ ಕಾಳುಗಳನ್ನು ಪುಡಿ ಮಾಡಿ ಆಹಾರ ಒದಗಿಸುತ್ತಿದ್ದೆವು. ಇದ್ದಂತಹ ಸ್ವಲ್ಪ ನೀರಿನಲ್ಲಿಯೇ ಹಸುಗಳನ್ನು ಮತ್ತು ಹತ್ತಾರು ಕುರಿಗಳನ್ನು ಸಾಕಲು ಆರಂಭಿಸಿದರು. ಹಸುಗಳಿಗೆ ಜೊಳ, ಶೇಂಗಾದ ಹೋಟ್ಟನ್ನೇ ಆಹಾರವಾಗಿ ಒದಗಿಸುತ್ತಿದ್ದೆವು. ಹೀಗೆ ನಾವೇ ಬೆಳೆದ ಜೋಳ, ಕಾಳುಗಳಿಂದ ಆಹಾರ ಒದಗಿಸುವುದರ ಮೂಲಕ ಹೊರಗಿನ ಆಹಾರ ಪದಾರ್ಥಗಳನ್ನು ಕೊಳ್ಳುವುದು ಕಡಿಮೆಯಾಯಿತು. ಇದರಿಂದ ಹಣವು ಉಳಿತಾಯವಾಯಿತು. ಆದಾಯವು ಹೆಚ್ಚಾಗುತ್ತಾ ಸಾಗಿತು. ಒಂದರಲ್ಲಿ ನಷ್ಟವಾದರೂ ಸಹ ಮತ್ತೊಂದರಲ್ಲಿ ಅದನ್ನು ಸರಿದೂಗಿಸಿಕೊಂಡು ಹೋಗುತಿತ್ತು. ಹೈನುಗಾರಿಕೆ ನಮ್ಮಪ್ಪನ ಪಾಲಿಗೆ ವರದಾನವಾಗಿ ಪರಿಣಮಿಸಿತು. ನಮ್ಮ ತಂದೆ, ಚಿಕ್ಕಪ್ಪನ ದೈರ್ಯದಿಂದ, ಅಜ್ಜನ ಆಸ್ತಿಯಲ್ಲೇ ಬದುಕಿ ತೋರಿಸುವ ಹಂಬಲದಿಂದ ಧೃತಿಗೆಡದೆ ಇಂದು ಒಂದು ಹಂತಕ್ಕೆ ಬಂದಿದ್ದೇವೆ. ನಾಲ್ಕೈದು ವರ್ಷಗಳ ಹಿಂದೆ ಜಮೀನಿನಲ್ಲಿ ಬೋರ್ ತೆಗೆಸಲು ಹಿಂದೇಟಾಕಿದ್ದರೆ ಮತ್ತು ಆತ್ಮಬಲವಿಲ್ಲದಿದ್ದರೆ ನಾನು ನನ್ನ ಅಣ್ಣ ಸ್ನಾತ್ತಕೊತ್ತರ ಪದವಿಯನ್ನು ಮುಗಿಸುತ್ತಿರಲಿಲ್ಲವೆನ್ನಿಸುತ್ತದೆ. ಅವರ ಭೂಮಿ ತಾಯಿಯ ಮೇಲಿನ ನಂಬಿಕೆ ಮತ್ತು ಅವರ ಆತ್ಮಬಲ ನಮ್ಮನ್ನು ಒಂದು ಹಂತಕ್ಕೆ ದಡ ಮುಟ್ಟಿಸಿದೆ.
- ಪ್ರಮೋದ್ ಲಕ್ಕವಳ್ಳಿ
Like us on Facebook The New India Times
POPULAR STORIES :
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?