ಬೇಡ ಬೇಡ ಅಂದ್ರು ಬೆನ್ನು ಬಿಡದೆ ಪ್ರೀತಿಸಿದ್ಲು..! “ಬೇಡ ಕಣೇ ಅರ್ಥ ಮಾಡಿಕೊಳ್ಳೆ.. ನಮ್ಮ ಜಾತಿಯೇ ಬೇರೆ ನಿಮ್ಮ ಜಾತಿಯೇ ಬೇರೆ..! ಮುಂದೆ ಇಬ್ಬರ ಮನೆಯಲ್ಲೂ ಒಪ್ಪುವುದಿಲ್ಲ.., ಅರ್ಥ ಮಾಡ್ಕೋ ಪ್ಲೀಸ್…! ನಮ್ ಮನೇಲಿ ಒಪ್ಪಿದ್ರೂ ನಿಮ್ಮಮನೆಯಲ್ಲಂತೂ ಒಪ್ಪಲ್ಲ ಕಣೇ..” ಅಂತ ಪವನ್ ಲೆಕ್ಕ ಇಲ್ಲದಷ್ಟು ಸಲ ಮಾವಿಕಳಿಗೆ ಹೇಳಿದ್ದ..! ಆದ್ರು “ಮಾವಿಕ” “ಪವನ”ನ ಮಾತನ್ನು ಕೇಳ್ಲೇ ಇಲ್ಲ..! “ನೀನಾಗಿಯೇ ಪ್ರೀತಿಸ್ತೀನಿ ಅಂತ ಹೇಳಿ, ಈಗ ಪ್ರೀತಿ ಮಾಡಲ್ಲ ಅಂದ್ರೆ ಹೇಗೋ..? ನಿನಗೆ ನನ್ನ ಪ್ರೀತಿ ಟೈಮ್ ಪಾಸ್ ಕಡ್ಲೆ ಕಾಯಿನಾ..? ಅಂತ ರೇಗಾಡಿ, ನಿನ್ನ ಬಿಟ್ಟು ನಾನು ಇರಲ್ಲ..! ನೀನು ನನ್ನ ಪ್ರೀತಿಸಲ್ಲ, ಮದುವೆ ಆಗಲ್ಲ ಅಂತಾದ್ರೆ ನಾನು ಸೂಸೈಡ್ ಮಾಡ್ಕೊಳ್ತೀನಿ..! ಅಂತ ಹಠ ಹಿಡಿದ್ಲು ಮಾವಿಕ..! ಮಾವಿಕಳ ಹಠಕ್ಕೆ ಪವನ್ ಸೋಲಲೇ ಬೇಕಾಯಿತು..! ಸೋತ, ಸರಿ, ಏನ್ ಆಗುತ್ತೋ ಆಗ್ಲಿ ನಾ ನಿನ್ನ ಪ್ರೀತಿಸ್ತೀನಿ ಅಂತ ಪ್ರೀತಿಸೋಕೆ ಶುರುಮಾಡಿದ..!
ಮಾವಿಕ ಮತ್ತು ಪವನ್ ಪರಿಚಯವಾಗಿದ್ದು ಶೃಂಗೇರಿಯಲ್ಲಿ ಓದುತ್ತಿರುವಾಗ..! ಮಾವಿಕಳಿಗೆ ಪವನ್ನೇ ಪ್ರಪೋಸ್ ಮಾಡಿದ್ದ..! ಪವನ್ ನ ಪ್ರೀತಿಯನ್ನು ಮಾವಿಕ ಒಪ್ಪಿಕೊಂಡಿರ್ಲಿಲ್ಲ..! ಆದ್ರೂ ಪವನ್ ಮಾತ್ರ ಅವಳನ್ನು ಬಿಡಲೇ ಇಲ್ಲ..! ಪ್ರೀತಿಸು..ಪ್ಲೀಸ್ ಲವ್ ಮಿ ಅಂತ ಬೇಡ್ತಾ ಇದ್ದ..! ಪವನ್ ಅಂದ್ರೆ ಮಾವಿಕಾಳಿಗೂ ತುಂಬಾ ಇಷ್ಟವಿತ್ತು..ಆದ್ರೆ ಅದನ್ನು ಇಷ್ಟುಬೇಗ ಹೇಳೋದು ಬೇಡವೆಂದು ಸುಮ್ಮನೇ ಇದ್ದಳು..! ಆಟ ಆಡಿಸ್ತಾ..! ಪವನ್ ಪ್ರಪೋಸ್ ಮಾಡಿದಾಗಲೆಲ್ಲಾ.. ಒಳಮನಸ್ಸಿನಲ್ಲಿಯೇ ನಗುತ್ತಾ.. ಖುಷಿ ಪಡ್ತಾ.. ಸಾರಿ, ಕಣೋ ಈಗ ಲವ್ ಮಾಡಲು ಆಗಲ್ಲ..! ಅಂತ ಹೇಳ್ತಾ ಇದ್ಲು..! ಬಟ್, ಕ್ಲಾಸ್ ಗೆ ಬಂಕ್ ಹಾಕಿ ಪವನ್ ಜೊತೆ ಸುತ್ತುತ್ತಾ ಇದ್ಲು..! ಶೃಂಗೇರಿಯಲ್ಲಿ ಫಿಲ್ಮ್ ಟ್ಯಾಕಿಸ್ ಇಲ್ಲ..! ಆದ್ರಿಂದ ಅದೆಷ್ಟೋ ಸಲ ಇವರಿಬ್ಬರು ಫಿಲ್ಮಿಗೆ ಅಂತ ತೀರ್ಥಹಳ್ಳಿ, ಕೊಪ್ಪಕ್ಕೆ ಎಷ್ಟು ಸಲ ಅಲೆದಾಡಿದ್ದಾರೋ ಅವರಿಗೂ ಲೆಕ್ಕವಿಲ್ಲ..! ಪವನ್ ಜೊತೆ ಎಲ್ಲಾ ಕಡೆ ಸುತ್ತುತ್ತಾ ಇದ್ಲು, ಸೋ, ಪವನ್ ಗೂ ಮಾವಿಕ “ನನ್ನ ಲವ್ ಮಾಡ್ತಾ ಇದ್ದಾಳೆ” ಅನ್ನೋದು ಕನ್ಫರ್ಮ್ ಆಗಿತ್ತು…!
“ಮಾವಿಕಾ, ನೀನು ನನ್ನ ಜೊತೆ ಹಗಲೂ ರಾತ್ರೀ ಚಾಟ್ ಮಾಡ್ತೀಯಾ.., ಎಲ್ಲಾ ಕಡೆ ಸುತ್ತುತ್ತೀಯಾ..? ನನ್ನ ಬೈಕ್ ಏರಿ, ಹೆಗಲ ಮೇಲೆ ಕೈ ಇಟ್ಟು ಕೂತು, ಎಲ್ಲಂದರಲ್ಲಿಗೆ ಬರ್ತೀಯಾ..? ನನಗೋಸ್ಕರ ಬಂಕ್ ಮಾಡ್ತೀಯಾ..? ಇಷ್ಟೆಲ್ಲಾ ಆದ್ರೂ ಪ್ರೀತಿಸ್ತೀನಿ ಕಣೋ ಅನ್ನೋಕೆ ನಿಂಗೆ ಏನೇ ಕಷ್ಟ..”? ಅಂತ ಕೇಳಿದಾಗ.. ಇಲ್ಲ, ಜಸ್ಟ್ ಫ್ರೆಂಡ್ ಆಗಿ ಹಾಗೆ ಮಾಡ್ತೀನಿ.. ಸಧ್ಯಕ್ಕಂತು ನಿನ್ನ ಮೇಲೆ ಲವ್ ಇಲ್ಲ..! ಮುಂದೆ ಏನ್ ಆಗುತ್ತೋ ಗೊತ್ತಿಲ್ಲ ಅಂತ ಕತೆ ಹೊಡೀತಾ ಇದ್ಲು..! ಸರಿ, ನಿನಗೆ ಪ್ರಪೋಸ್ ಮಾಡಿದವನು ನಾನೊಬ್ಬನೇನಾ ಅಂತ ಪವನ್ ಕೇಳಿದ್ರೆ, ಇಲ್ಲ ನನಗೆ ಇಲ್ಲಿ ತನಕ ಐದಾರು ಜನ ಪ್ರಪೋಸ್ ಮಾಡಿದ್ದಾರೆ.. ಬಟ್ ಅವರ್ಯಾರನ್ನೂ ಒಪ್ಪಿ ಕೊಂಡಿಲ್ಲ..! ಪ್ರಪೋಸ್ ಮಾಡಿದ್ರು ಅಂತ ಅವರನ್ನ ಮಾತೇ ಆಡಿಸ್ತಾ ಇಲ್ಲ..! ನೀನು ಬಿಡು, ಅವರಂತಲ್ಲ ಅಂತ ಇನ್ ಡೈರೆಕ್ಟ್ ಆಗಿ ಪ್ರೀತಸೋ ವಿಷಯವನ್ನು ಹೇಳ್ತಾ ಇದ್ಲು..! ಪವನ್ ಗೆ ಅದು ಅರ್ಥವಾಗ್ತಾ ಇದ್ರೂ ಅವಳ ಬಾಯಿಯಿಂದಲೇ ಐ ಲವ್ ಯು ಅಂತರ ಹೇಳಿಸಿಕೊಳ್ಳೋಕೆ ಶತಾಯಗತಾಯ ಪ್ರಯತ್ನಪಟ್ಟು ಸೋತು ಹೋದ..!
ಒಮ್ಮೆ ಪವನ್ ಏಕಾಂತದಲ್ಲಿರುವಾಗ.. ಯೋಚನೆ ಮಾಡ್ದ.. “ಮಾವಿಕ ಲಿಂಗಾಯಿತಳು, ನಾನು ಕುರುಬ, ಅವಳೂ ನನ್ನನ್ನು ಪ್ರೀತಿಸಿದ್ರೂ ಮದ್ವೆ ಆಗಲು ಸಾಧ್ಯನಾ..”ನನ್ನ ಮನೆಯಲ್ಲಿ ಒಪ್ಪಿದ್ದರೂ ಅವರ ಮನೆಯಲ್ಲಿ ಮದುವೆ ಒಪ್ಪುತ್ತಾರೋ..? ಅಂತ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡ್ದ…”! ಮರುದಿನವೇ.. “ಮಾವಿಕ, ಸಾರಿ, ನಾನು ನಿನ್ನ ಪ್ರೀತಿಸ್ತಾ ಇಲ್ಲ, ತಮಾಷೆಗಾಗಿ ಕಾಟ ಕೊಟ್ಟೆ.. ನೀನು ಒಪ್ಪಿಕೊಳ್ದೇ ಇದ್ದಿದ್ದೇ ಒಳ್ಳೆಯದಾಯ್ತು” ಅಂದ..! ಆಗಲೇ ಮಾವಿಕ ಉಲ್ಟ ಹೊಡೆದಿದ್ದು, ಅಲ್ಲಾ ಕಣೋ, ಪ್ರೀತಿ ಅಂದ್ರೆ ಏನು ಅಂತ ಅನ್ಕೊಂಡಿದ್ದೀ..! ನಾನು ಬಾಯಿಬಿಟ್ಟು ಪ್ರೀತಿಸ್ತೀನಿ ಅಂತ ಹೇಳಿರ್ಲಿಲ್ಲ.. ನಿಜ, ಬಟ್ ನಿನ್ನ ಜೊತೆ ಸುತ್ತಿದ್ದು..? ಯಾವ ಹುಡುಗಿಯಾದ್ರೂ ಇಷ್ಟ ಇಲ್ಲದ ಹುಡುಗನ ಜೊತೆ ಸುತ್ತುತ್ತಾಳೋ..?! ಅಂತ ಪ್ರೇಮ ಪಾಠ ಶುರು ಮಾಡಿದ್ಲು..! ತಪ್ಪಾಯ್ತು, ಈಗ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡ್ದೆ, ಜಾತಿ ನಮ್ಮ ಪ್ರೀತಿಗೆ ಅಡ್ಡಿ ಬರುತ್ತೆ..! ದಯಮಾಡಿ ಮರೆತು ಬಿಡು ಫ್ರೆಂಡ್ಸ್ ಆಗಿಯೇ ಇರೋಣ ಅಂತಾನೆ ಪವನ್..! ಪವನ್ ಎಷ್ಟೇ ಹೇಳಿದ್ರು ಕೆಳದೇ ಮಾವಿಕ ಕೇಳದೇ ಇದ್ದಾಗ.. ಏನ್ ಆಗುತ್ತೋ ಆಗ್ಲಿ ಅಂತ ಪವನ್ ಕೂಡ ಪ್ರೀತಿಸ್ತಾನೆ,…!
ಪ್ರೀತಿಸ್ತ ಪ್ರೀತಿಸ್ತಾನೆ ಮೂರು ವರ್ಷದ ಡಿಗ್ರೀ ಮುಗಿಯುತ್ತೆ..! ಮಾಸ್ಟರ್ ಡಿಗ್ರಿಗೆ ಶಿವಮೊಗ್ಗದ ಶಂಕರಘಟ್ಟದ ಕುವೆಂಪು ವಿವಿಗೆ ಸೇರ್ತಾರೆ..! ಇಬ್ಬರೂ ಎಂಕಾಂ..! ಅಲ್ಲೂ ಲವ್ವಿ ಡವ್ವಿ ಮುಂದುವರೆಯುತ್ತೆ..! ಶೃಂಗೇರಿಯಿಂದ ಕೊಪ್ಪ, ತೀರ್ಥಹಳ್ಳಿಗೆ ಫಿಲ್ಮ್ ಗೆಂದು ಹೋಗ್ತಾ ಇದ್ದ ಇವರಿಬ್ಬರಿಗೆ ಶಂಕರಘಟ್ಟದಿಂದ ತರಿಕೆರೆ ಅಥವಾ ಶಿವಮೊಗ್ಗ ದೂರ ಆಗ್ತಾ ಇರ್ಲಿಲ್ವಲ್ಲಾ..? ವಾರಕ್ಕೊಮ್ಮೆಯಾದ್ರೂ ಶಿವಮೊಗ್ಗ, ತರಿಕೆರೆ ಅಂತ ಸುತ್ತುತ್ತಾ ಇದ್ರು..! ಅಂತೂ ಇಂತು ಸುತ್ತುತ್ತಾ ಸುತ್ತುತ್ತಲೇ ಎಂಕಾಂ ಕೂಡ ಮುಗಿಸಿಯೇ ಬಿಟ್ರು..! ಓದಿನಲ್ಲೂ ಮುಂದಿದ್ದ ಪವನ್ ಎಂಕಾಂ ಮೂರನೇ ಸೆಮಿಸ್ಟರ್ ನಲ್ಲಿರುವಾಗಲೇ ಎನ್ ಇ ಟಿ ಪಾಸ್ ಮಾಡಿದ್ದ..! (ನಾಲ್ಕನೇ ಸೆಮ್ ನಲ್ಲಿರುವಾಗ ಅದರ ರಿಸೆಲ್ಟ್ ಬರುತ್ತೆ) ಬ್ಯಾಂಕಿಂಗ್ ಎಕ್ಸಾಮ್ ಕೂಡ ಪಾಸ್ ಮಾಡಿ.. ಎಂಕಾಂ ಮುಗಿಯುವಷ್ಟರಲ್ಲಿ ಬ್ಯಾಂಕ್ ಉದ್ಯೋಗಿ ಕೂಡ ಆದ..! ಮಾವಿಕ ಖಾಸಗೀ ಕಾಲೇಜ್ ಒಂದರಲ್ಲಿ ಉಪನ್ಯಾಸಕಿ ಆದಳು..!
ಈಗ ಅವರ ಮದುವೆ ಸಮಯ ಬಂತು..! ಮಾವಿಕಳ ಮನೆಯಲ್ಲಿ ಹುಡುಗನನ್ನು ಹುಡುಕ್ತಾ ಇದ್ರು..! ಪವನ್ ಅವರ ಮನೆಗೆ ನೇರವಾಗಿಯೇ ಬಂದು ಮಾವಿಕಳನ್ನು ಪ್ರೀತಿಸುತ್ತಿದ್ದೇನೆಂದು, ಅವಳನ್ನು ಮದುವೆ ಆಗ್ತಿನೆಂದೂ ಹೇಳ್ದ..! ಅದಕ್ಕ ಮಾವಿಕಳ ಮನೆಯಲ್ಲಿ ಎಲ್ಲರೂ ಕೆಂಡಮಂಡಲವಾದ್ರು..! ಹಾಗೆಯೇ ಆಗುತ್ತೆ ಅಂತ ಪವನ್ ಗೆ ಗೊತ್ತಿತ್ತು..! ಬಟ್ ,ಪ್ರೀತಿಸಿದ ಹುಡುಗಿಗೋಸ್ಕರ ಎಂಥಹಾ ರಿಸ್ಕ್ ತೆಗೆದುಕೊಳ್ಳಲೂ ಸಿದ್ಧನಿದ್ದ..! ಮಾವಿಕಾ ಕೂಡ, ಪವನನ್ನೇ ಮದ್ವೆ ಆಗೋದು ಅಂತ ಹಠಕ್ಕೆ ಬಿದ್ದಳು..! ಆದ್ರೂ ಮನೆಯಲ್ಲಿ ಒಪ್ಪಲಿಲ್ಲ..! ಜಾತಿ ಪ್ರತಿಷ್ಠೆಯೇ.. ಆ ಪ್ರೀತಿಗೆ ಗೊತ್ತಿದ್ದು ಗೊತ್ತಿದ್ದೂ ಅಡ್ಡಿ ಆಯ್ತು..! ಪವನ್ ಮನೆಯವರು ಬಂದು ಮಾವಿಕನ ಮನೆಯಲ್ಲಿ ಮಾತನಾಡಿದ್ರೂ,..ಪವನ್ ಬ್ಯಾಂಕ್ ಉದ್ಯೋಗಿ ಎಂದು ಗೊತ್ತಾಗಿದ್ರೂ ಮಾವಿಕಳ ಮನೆಯಲ್ಲಿ ಮದುವೆಗೆ ಒಪ್ಪಲಿಲ್ಲ..! ಕೊನೆಗೆ ದಿಕ್ಕೇ ತೋಚದ ಪವನ್ ಕ್ರಿಮಿನಾಶಕ ಕುಡಿದ..! ಇ ಸುದ್ದಿ ಕೇಳ್ತಾ ಇದ್ದಂಗೆ ಮಾವಿಕ ಮನೆಯಲ್ಲಿದ್ದ “ಮೈಲು ತುತ್ತಾ..” ಸೇವಿಸಿದ್ಲು..! ಇಬ್ಬರೂ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿರುವಾಗ ಮಾವಿಕಳ ಮನೆಯವರಿಗೆ ಬುದ್ಧಿಬಂತು..! ದೇವರೇ ಮಗಳನ್ನು ಬದುಕಿಸಿಕೊಡು, ಆ ಹುಡುಗನನ್ನೂ ಉಳಿಸು.. ಒಬ್ಬರಿಲ್ಲದೇ ಇನ್ನೊಬ್ಬರಿಲ್ಲ..! ಇವರಿಬ್ಬರಿಲ್ಲದೇ ನಮ್ಮ ಎರಡು ಕುಟುಂಬಗಳೇ ಇಲ್ಲ..! ಅಂತ ಬೇಡಿ ಕೊಂಡ್ರು.. ಕೊನೆಗೂ ಆ ಇಬ್ಬರು ಪ್ರೇಮಿಗಳು ಬದುಕುಳಿದರು..! ಮದುವೆಯೂ ಆಯ್ತು..! ಜಾತಿ ಬೇಧ ಮರೆತು ಎರಡೂ ಕುಟುಂಬವೂ ಒಂದಾಗಿವೆ..! ಪವನ್ ಅಪ್ಪ ಅಮ್ಮ.. ಮಾವಿಕಳ ಅಪ್ಪ ಅಮ್ಮ ಕೂಡ ಮೊಮ್ಮಗಳನ್ನು ಆಡಿಸುತ್ತಾ ಕಾಲ ಕಳೀತಾ ಇದ್ದಾರೆ…! ಸೇವಿಸಿದ ವಿಷವೇ ಪ್ರೇಮಿಗಳ ಪ್ರೀತಿಯನ್ನು ಉಳಿಸಿದೆ..! ಏನೇ ಆಗಲಿ, ಇಬ್ಬರೂ ಒಬ್ಬರನೊಬ್ಬರು ಬಿಟ್ಟು ಕೊಡದೇ ಕೊನೆಗೂ ಒಂದಾದರಲ್ಲ..! ಪ್ರೀತಿ ಅಂದ್ರೆ ಇದು ಕಣ್ರೀ..!
- ಶಶಿಧರ ಡಿ ಎಸ್ ದೋಣಿಹಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com