ರೇವಣ್ಣ ಕುಟುಂಬ ಪದೇ ಪದೆ ಸಂಕಷ್ಟಕ್ಕೆ ಸಿಲುಕುತ್ತಿದ್ದು, ರೇವಣ್ಣ ಅವರ ಅಪ್ತರಿಂದಲೇ ಕುಟುಂಬದ ಪ್ರಕರಣಗಳು ಹೊರಬರುತ್ತಿವೆ ಎನ್ನಲಾಗಿದೆ. ಸೂರಜ್ ರೇವಣ್ಣ ಪ್ರಕರಣ ಮೊದಲು ಹೊರಬಂದಿದ್ದು ಮಾಜಿ ಕಾರು ಚಾಲಕನಿಂದ ಎಂದು ಹೇಳಲಾಗುತ್ತಿದೆ. ಈಗ ಸೂರಜ್ ರೇವಣ್ಣ ಬಂಧನವಾಗುತ್ತಿದ್ದಂತೆ ಆತನ ಆಪ್ತ ಶಿವಕುಮಾರ್ ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಅಲ್ಲದೇ, ಅರಕಲಗೂಡು ಮೂಲದ ಯುವಕ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ನೀಡುತ್ತಿದ್ದಂತೆ ಸೂರಜ್ ಆಪ್ತ ಶಿವಕುಮಾರ್ ಸಂತ್ರಸ್ತ ಯುವಕನ ವಿರುದ್ಧವೇ ಬ್ಲ್ಯಾಕ್ ಮೇಲ್, ಬೆದರಿಕೆ, ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಪ್ರಕರಣ ದಾಖಲಿಸಿದ್ದರು.
ದೂರು ದಾಖಲಾದ ಬಳಿಕ ಶಿವಕುಮಾರ್ ಯಾರ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಈ ಬೆಳವಣಿಗೆ ಗಮನಿಸಿದರೆ ಸೂರಜ್ ಜೊತೆಯಲ್ಲಿಯೇ ಇದ್ದು ಶಿವಕುಮಾರ್ ನೇ ಬ್ಲ್ಯಾಕ್ ಮೇಲ್ ತಂತ್ರ ರೂಪಿಸಿದ್ದನೇ? ಎಂಬ ಶಂಕೆ ವ್ಯಕ್ತವಾಗಿದೆ.