ಶಿವಮೊಗ್ಗ: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ವರ್ಷ ದಾಖಲಾದ ಪ್ರಕರಣಗಳ ಪ್ರಕಾರ ರಾಜ್ಯದಲ್ಲಿ ಬರೋಬ್ಬರಿ 7,000 ಗಡಿಯನ್ನು ಮೀರಿದೆ. ಇದರ ಬೆನ್ನಲ್ಲೇ ಹೊಸನಗರ ತಾಲೂಕು ರಿಪ್ಪನ್‌ಪೇಟೆಯ ಮಹಿಳೆಯೊಬ್ಬರು ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ್ದಾರೆ. ರಶ್ಮಿ ಆರ್.ನಾಯಕ್ ಮೃತ ದುರ್ದೈವಿಯಾಗಿದ್ದು, ಕಳೆದ 15-20 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು.
ರಿಪ್ಪನ್‌ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಡೆಸಲಾದ ಪರೀಕ್ಷೆಯಲ್ಲಿ ಡೆಂಗ್ಯೂ ಪಾಸಿಟಿವ್ ಬಂದಿತ್ತು. ಚಿಕಿತ್ಸೆಯ ಬಳಿಕ ಮನೆಯಲ್ಲಿದ್ದ ರಶ್ಮಿ, ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ, ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಸಂಜೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.