ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡೋಕು ಭಯಪಡುವಂತೆ ವಾತಾವರಣ ನಿರ್ಮಾಣವಾಗಿದೆ. ಹೌದು ಮನೆ ಎದುರು ತಿರುಗಾಡುತ್ತಿರುವಾಗ ಚಿನ್ನದ ಸರ ಕಿತ್ತುಕೊಂಡು ಹೋಗುವುದು, ಅವರ ಮೇಲೆ ಹಲ್ಲೆ ನಡೆಸುವುದು, ಮೊಬೈಲ್, ಪರ್ಸ್ ಎಗರಿಸುವುದು ಸೇರಿ ಹಲವು ರೀತಿಯ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ.
ಇದೀಗ ಅಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯು ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದಾನೆ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್ ಕೊಟ್ಟಿದ್ದಾನೆ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದಾರೆ. ಅವರ ಹಿಂದೆಯೇ ಓಡಿ ಬಂದ ದುರುಳನು, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದಾನೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗೆಯೇ, ನಗರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಜನ ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಮಹಿಳೆಯು ಮನೆಯ ಬಳಿಯಲ್ಲೇ ವಾಕಿಂಗ್ ಮಾಡುವಾಗ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಹಿಳೆಯು ಉತ್ತರ ಭಾರತದವರಾಗಿದ್ದು, ಬೆಳಗ್ಗೆ ಕೆಲ ಹೆಣ್ಣುಮಕ್ಕಳು ಸೇರಿ ವಾಕಿಂಗ್ ಹೋಗುತ್ತಿದ್ದರು. ಪಕ್ಕದ ಮನೆಯವರು ಬರುವ ಕಾರಣ ಅವರು ರಸ್ತೆ ಬದಿ ಕಾಯುತ್ತಿದ್ದರು ಎಂದು ತಿಳಿದುಬಂದಿದೆ. ವಿಡಿಯೊ ವೈರಲ್ ಆದ ಬಳಿಕ ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಕೂಡ ಭಯಪಡುವಂತಾಗಿದೆ.