ಹೈಕೋರ್ಟ್ ಮೆಟ್ಟಿಲೇರಿದ ಆರೋಪಿ ದರ್ಶನ್: ಚಾರ್ಜ್ ಶೀಟ್ ಮಾಹಿತಿ ಬಹಿರಂಗಪಡಿಸದಂತೆ ನಿರ್ಬಂಧ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸುಮಾರು ಮೂರು ತಿಂಗಳ ಬಳಿಕ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸುಮಾರು 3991 ಪುಟಗಳ ಆರೋಪ ಪಟ್ಟಿಯಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ರಾಕ್ಷಸ ಕೃತ್ಯ ಬಯಲಾಗಿದೆ. ಇತ್ತ ರೇಣುಕಾಸ್ವಾಮಿ ಕುಟುಂಬಸ್ಥರು ಕಣ್ಣೀರು ಹಾಕ್ತಿದ್ರೆ ಅತ್ತ ಡಿ ಗ್ಯಾಂಗ್ ಜೈಲಿನಿಂದ ಹೊರ ಬರಲು ಸಿದ್ಧತೆಯಲ್ಲಿ ತೊಡಗಿದೆ.
ಇದರ ಬೆನ್ನಲ್ಲೇ ದರ್ಶನ್ ಪರ ವಕೀಲರು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಡಲು ಮುಂದಾಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 17 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. ಚಾರ್ಜ್ಶೀಟ್ನಲ್ಲಿ ದರ್ಶನ್ ಅವರು ಏನು ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ರೇಣುಕಾ ಸ್ವಾಮಿಗೆ ಕೊಟ್ಟ ಚಿತ್ರ ಹಿಂಸೆಗಳ ಬಗ್ಗೆ ಅಲ್ಲಿ ವಿವರಣೆ ನೀಡಲಾಗಿತ್ತು. ಇವುಗಳ ಪ್ರಸಾರದ ಮೇಲೆ ನಿರ್ಬಂಧ ಹೇರಿ ಎಂದು ದರ್ಶನ್ ಕೋರಿದ್ದಾರೆ.
ಸದ್ಯ ದರ್ಶನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಾರ್ಜ್ಶೀಟ್ನಲ್ಲಿನ ಗೌಪ್ಯ ಮಾಹಿತಿ ಬಹಿರಂಗಪಡಿಸದಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇತ್ತೀಚೆಗೆ ದರ್ಶನ್ ಅವರು ಇರೋ ಸೆಲ್ಗೆ ಟಿವಿ ಬಂದಿದೆ. ಅವರು ಟಿವಿಗಾಗಿ ಬೇಡಿಕೆ ಇಟ್ಟಿದ್ದರು. ಜೈಲಿನ ನಿಯಮದಂತೆ ಅವರಿಗೆ ಟಿವಿ ನೀಡಲಾಗಿದೆ. ಟಿವಿ ವೀಕ್ಷಣೆ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.