ಮಳೆ ಅವಾಂತರ: ಚರಂಡಿಯಲ್ಲಿ ಕೊಚ್ಚಿ ಹೋಗಿ ಬಾಲಕ ದುರ್ಮರಣ!
ಹಾವೇರಿ:- ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಅವಾಂತರ ಒಂದು ನಡೆದಿದ್ದು, ಚರಂಡಿಯಲ್ಲಿ ಕೊಚ್ಚಿ ಹೋಗಿ ಬಾಲಕ ಸಾವನ್ನಪ್ಪಿದ್ದಾನೆ.
ಹಾವೇರಿ ಎಸ್‌ಪಿ ಕಚೇರಿ ಮುಂಭಾಗದಲ್ಲಿ ಈ ಘಟನೆ ನಡೆದಿದೆ. 12 ವರ್ಷದ ನೀವೆದನ್ ಬಸವರಾಜ್ ಗುಡಗೇರಿ ಮೃತಪಟ್ಟ ಬಾಲಕ ಎನ್ನಲಾಗಿದೆ.
ಮಳೆ ಹೆಚ್ಚಾಗಿರೋ ಹಿನ್ನೆಲೆ ಬಾಲಕ ಬೆಳಗ್ಗೆ ರಸ್ತೆಯಲ್ಲಿ ನೀರನ್ನ ನೋಡುಲು ಹೋಗಿದ್ದ. ಈ ವೇಳೆ ರಸ್ತೆ ಕಾಣದೆ ಚರಂಡಿಗೆ ಬಿದ್ದು ಬಾಲಕ ಕೊಚ್ಚಿ ಹೋಗಿದ್ದಾನೆ. ಸುದ್ದಿ ಕೇಳುತ್ತಿದ್ದಂತೆ ತಾಯಿ ಅಸ್ವಸ್ಥರಾಗಿದ್ದು, ಅಂಬುಲೆನ್ಸ್ ಮೂಲಕ ಅವರನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ, ಎಸ್ಪಿ ಅಂಶುಕುಮಾರ್, ಪೊಲೀಸ್ ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದಾರೆ. ಬಾಲಕನ ಪತ್ತೆಗಾಗಿ ಸತತ ಒಂದೂವರೆ ಗಂಟೆಯಿಂದ ಪಿ.ಬಿ ರಸ್ತೆ ಬಳಿ ಇರುವ ಚರಂಡಿಯಲ್ಲಿ ಶೋಧ ಕಾರ್ಯ ಮುಂದುವರೆಯುತ್ತಿದೆ.