ಜಾತಿ ನಿಂದನೆ ಪ್ರಕರಣ: ಆಡಿಯೋ ಶಾಸಕ ಮುನಿರತ್ನದ್ದೇ ಎಂದು ದೃಢ
ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರನಿಗೆ ಲಂಚ ಕೇಳಿದ್ದಲ್ಲದೇ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದಕ್ಕೆ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದರು. ಆದ್ರೆ ಇದೀಗ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜಾತಿ ನಿಂದನೆ ಮಾಡಿದ ಆರೋಪದಡಿ FSL ವರದಿಯಲ್ಲಿ BJP ಶಾಸಕನ ಧ್ವನಿ ಧೃಡವಾಗಿದೆ.
ಫೋನ್ ನಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮುನಿರತ್ನ ವಿರುದ್ಧ ಗುತ್ತಿಗೆದಾರ ವೇಲು ನಾಯ್ಕರ್ ದೂರು ದಾಖಲಿಸಿದ್ದು, ಜೊತೆಗೆ ಅವರು ಪೊಲೀಸರಿಗೆ ನೀಡಿದ್ದ ಆಡಿಯೋ ಕ್ಲಿಪ್ಅನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಆಡಿಯೋದಲ್ಲಿರುವುದು ಮುನಿರತ್ನ ಅವರ ಧ್ವನಿ ಎಂದು ದೃಢವಾಗಿದೆ.
ಚೆಲುವರಾಜು ಜತೆಗೆ ಮಾತನಾಡುವ ವೇಳೆ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆಂದು ಗುತ್ತಿಗೆದಾರ ವೇಲು ನಾಯ್ಕರ್ ಅವರು ಮುನಿರತ್ನ ಅವರ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಮುನಿರತ್ನ ನಿಂದನೆ ಮಾಡಿದ್ದ ಆಡಿಯೋವನ್ನು ಸಹ ಪೊಲೀಸರಿಗೆ ನೀಡಿದ್ದರು. ಈ ದೂರಿನ ಮೇರೆಗೆ ಮುನಿರತ್ನ ವಿರುದ್ಧ ಸೆಪ್ಟೆಂಬರ್ 13 ರಂದು ಎಫ್ಐಆರ್ ದಾಖಲಾಗಿತ್ತು.
ಬಳಿಕ ಸೆ.14ರಂದು ಎಸ್ಐಟಿ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದರು. ಆ ವೇಳೆ ಪೆನ್ ಡ್ರೈವ್ ಆಡಿಯೋ ಕ್ಲಿಪ್ ಹಾಗೂ ಬಂಧನ ವೇಳೆ ಪಡೆಯಲಾಗಿದ್ದ ಶಾಸಕ ಮುನಿರತ್ನ ವಾಯ್ಸ್ ಸ್ಯಾಂಪಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಿದರು. ಈಗ ಎಫ್ಎಸ್ಎಲ್ ರಿಪೋರ್ಟ್ ಎಸ್ಐಟಿ ಪೊಲೀಸರ ಕೈಸೇರಿದ್ದು, ಮುನಿರತ್ನ ಜಾತಿ ನಿಂದನೆ ಮಾಡಿದ್ದರು ಎನ್ನಲಾದ ಆಡಿಯೋ ಧ್ವನಿ ಧೃಡವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.