ಎಷ್ಟೇ ನೀರು ಕುಡಿದರೂ ಬಾಯಾರಿಕೆ ನೀಗುತ್ತಿಲ್ವಾ..? ಕಂಟ್ರೋಲ್ ಮಾಡೋಕೆ ಈ ಟಿಪ್ಸ್ ಫಾಲೋ ಮಾಡಿ
ನೀರು ಎಲ್ಲರಿಗೂ ಬೇಕಾಗಿರುವ ಪದಾರ್ಥ. ದೇಹದ ಸರ್ವರೀತಿಯ ಆರೋಗ್ಯವನ್ನು ಕಾಪಾಡಲು ನೀರು ಅತ್ಯಾವಶ್ಯಕವಾಗಿದೆ. ಭೂಮಿಯ ಮೇಲಿನ ಪ್ರತೀ ಜೀವಿಗೂ ಜೀವಿಸಲು ನೀರು ಬೇಕು. ಆಗಾಗ ಬಾಯಾರಿಕೆಯಾಗುವುದು ಸಾಮಾನ್ಯ. ಹಲವು ಸಲ ನಾವು ಸೇವಿಸುವ ಆಹಾರದಿಂದಲೂ ಪದೇ ಪದೇ ನೀರಡಿಕೆಯಾಗುತ್ತದೆ. ಉದಾಹರಣೆಗೆ ಎಣ್ಣೆ ಅಥವಾ ಕರಿದ ಪದಾರ್ಥಗಳ ಸೇವನೆ,
ಉಪ್ಪಿನ ಅಂಶವಿರುವ ಆಹಾರದಿಂದ ಅಥವಾ ದೇಹವನ್ನು ಒಣಗಿಸುವ ಗೋದಿ ಚಪಾತಿ, ಮೈದಾ ಆಹಾರಗಳ ಸೇವನೆಯಿಂದ ಹೆಚ್ಚು ಬಾಯಾರಿಕೆಯಾಗುತ್ತದೆ. ಹೀಗೆ ಆಗುವ ಬಾಯಾರಿಕೆಯನ್ನು ತಡೆಯುವುದು ಹೇಗೆ, ಪದೇ ಪದೇ ಬಾಯಾರಿಕೆಯಾದಾಗ ಯಾವ ರೀತಿಯ ಆಹಾರ ಸೇವನೆ ಒಳ್ಳೆಯದು. ಮನೆಯಲ್ಲಿ ಯಾವ ರೀತಿ ಆರೈಕೆ ಮಾಡಿಕೊಳ್ಳಬೇಕು ಎನ್ನುವ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.
ಅತಿಯಾದ ಬಾಯಾರಿಕೆ ನೀಗಲು ಇಲ್ಲಿದೆ ಸಲಹೆಗಳು
* ಉಪ್ಪಿನೊಡನೆ ಮಾವಿನಕಾಯಿ ನಂಜಿಕೊಂಡು ತಿಂದರೆ ಬಾಯಾರಿಕೆಯ ದೂರವಾಗುತ್ತದೆ.
* ಒಳ್ಳೆಯ ಕಸಿ ಮಾವಿನ ಹಣ್ಣುಗಳನ್ನು ಊಟ ಆದ ನಂತರ ಸೇವಿಸುವುದರಿಂದ ಬಾಯಾರಿಕೆ ಇಂಗುತ್ತದೆ.
* ಎಳೆನೀರನ್ನು ಕುಡಿಯುವುದರಿಂದ ಬಾಯಾರಿಕೆ ನಿವಾರಣೆ ಆಗುವುದು.
* ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಅಗಿದು, ರಸದೊಂದಿಗೆ ನುಂಗುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ.
* ಮೂಸಂಬಿ ಹಣ್ಣಿನ ರಸವನ್ನು ಸೇವಿಸುವುದರಿಂದ ಬಾಯಾರಿಕೆ ದೂರ ಆಗುವುದು.
* ಕಿತ್ತಳೆಹಣ್ಣಿನ ರಸವನ್ನು ಸೇವಿಸಿದರೆ ಬಾಯಾರಿಕೆ ದೂರ ಆಗುವುದು.
* ಬೆಲ್ಲದ ಪಾನಕವನ್ನು ಸೇವಿಸಿದರೆ ಬಾಯಾರಿಕೆಯ ನಿವಾರಣೆ ಆಗುವುದರೊಂದಿಗೆ ದೇಹವು ತಂಪಾಗುತ್ತದೆ.
* ಅತಿದಾಹದಿಂದ ಬಳಲುವವರು ಒಂದು ಬಟ್ಟಲು ಕಾಯಿಸಿದ ಹಾಲಿಗೆ ಅರಿಶಿನ ಪುಡಿ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿದರೆ ದಾಹ ಕಡಿಮೆಯಾಗುತ್ತದೆ.
* ಕಲ್ಲಂಗಡಿ ಹಣ್ಣಿಗೆ ಜೀರಿಗೆಪುಡಿ, ಕಲ್ಲುಸಕ್ಕರೆಯ ಪುಡಿ ಸೇರಿಸಿ ತಿಂದರೆ ಬಾಯಾರಿಕೆ ಕಡಿಮೆಯಾಗುತ್ತದೆ.
* ನೀರು ಮಜ್ಜಿಗೆಗೆ ಕೊತ್ತುಂಬರಿ ಸೊಪ್ಪು ಹಾಗೂ ಉಪ್ಪು ಬೆರೆಸಿ ಕುಡಿದರೆ ಬಾಯಾರಿಕೆ ಕಡಿಮೆಯಾಗುತ್ತದೆ.
* ಕಲ್ಲಂಗಡಿ ಹಣ್ಣಿನ, ಖರ್ಬೂಜದ ಹಣ್ಣಿನ ಪಾನಕ ಬಾಯಾರಿಕೆಯ ನಿವಾರಣೆಯಾಗುತ್ತದೆ.