ಸರ್ಕಾರಕ್ಕೆ ಹಣದ ಸಮಸ್ಯೆ ಇಲ್ಲ. ಆರ್ಥಿಕವಾಗಿ ನಾವು ಬಲಿಷ್ಠವಾಗಿದ್ದೇವೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಸರ್ಕಾರಕ್ಕೆ ಹಣದ ಸಮಸ್ಯೆ ಇಲ್ಲ. ಆರ್ಥಿಕವಾಗಿ ನಾವು ಬಲಿಷ್ಠವಾಗಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರಾಜಸ್ಥಾನಕ್ಕೆ ಪ್ರಯಾಣ ಬೆಳೆಸುವ ಮುನ್ನ ನೀರಾವರಿ ಸಚಿವರೂ ಆದ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪಿಲ್ಲ,
ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ಇದೆಲ್ಲವೂ ಸುಳ್ಳು, ಸರ್ಕಾರಕ್ಕೆ ಸಂಪನ್ಮೂಲ ಕ್ರೂಢೀಕರಣ ಒಂದೇ ದಿನಕ್ಕೆ ಆಗುವುದಿಲ್ಲ. ಹಂತ ಹಂತವಾಗಿ ಬರುತ್ತದೆ. ಆರ್ಥಿಕ ವರ್ಷಾಂತ್ಯದ ವೇಳೆಗೆ ಎಲ್ಲವೂ ಸರಿಯಾಗುತ್ತದೆ. ಸರ್ಕಾರಕ್ಕೆ ಹಣದ ಸಮಸ್ಯೆ ಇಲ್ಲ. ಆರ್ಥಿಕವಾಗಿ ನಾವು ಬಲಿಷ್ಠವಾಗಿದ್ದೇವೆ.
ಅನ್ನಭಾಗ್ಯದಲ್ಲಿ ಜನರಿಗೆ ತಲುಪಬೇಕಾದ ಅಕ್ಕಿ ತಲುಪುತ್ತಿದೆ. ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳ ಹೊರತಾಗಿ, ಈ ವಿಚಾರದಲ್ಲಿ ಜನಸಾಮಾನ್ಯರಿಗೆ ಅಸಮಾಧಾನ ಇಲ್ಲ. ಜನರು ಈ ವಿಚಾರದಲ್ಲಿ ಸಂತೋಷವಾಗಿದ್ದಾರೆ. ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ. ಎರಡು, ಮೂರು ತಿಂಗಳು ಹಣ ಬಾಕಿ ಇದ್ದು, ಈ ತಿಂಗಳು ಬಿಡುಗಡೆಯಾಗಲಿದೆ” ಎಂದು ತಿಳಿಸಿದರು.