MESನವರು ಗೂಂಡಾಗಿರಿ ಮಾಡವವರಿಗೆ ಬೆಂಬಲ ಕೊಟ್ಟರೆ ನಾವು ಕೇಸ್ ಹಾಕುತ್ತೇವೆ: ಸಚಿವ ರಾಮಲಿಂಗಾ ರೆಡ್ಡಿ
ಬೆಳಗಾವಿ: ಎಂಇಎಸ್‌ನವರು ಗೂಂಡಾಗಿರಿ ಮಾಡವವರಿಗೆ ಬೆಂಬಲ ಕೊಟ್ಟರೆ ನಾವು ಕೇಸ್ ಹಾಕುತ್ತೇವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಇಂದು ಬೆಳಗಾವಿಗೆ ಭೇಟಿ ನೀಡಿದ್ದ ಸಚಿವರು ಹಲ್ಲೆಗೊಳಗಾದ ಕಂಡೆಕ್ಟರ್ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಕಂಡಕ್ಟರ್ ಆರೋಗ್ಯ ಸ್ಥಿರವಾಗಿದೆ. ಎರಡು ದಿನಗಳಲ್ಲಿ ಮನೆಗೆ ಕಳುಹಿಸುತ್ತಾರೆ. ನಮ್ಮ ಎಂಡಿ ಅವರು ಪ್ರತಿದಿನ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಗಲಾಟೆಯಾದ ಬಳಿಕ ಕೇಸ್ ಕೊಟ್ಟಿದ್ದಕ್ಕೆ ಗಾಬರಿಯಾಗಿದ್ದಾರೆ. ಏನೇ ಕೇಸ್ ಮಾಡಲಿ ತನಿಖೆ ಮಾಡುತ್ತಾರೆ ಎಂದು ಹೇಳಿದರು.
ಚಿತ್ರದುರ್ಗದಲ್ಲಿ ನಮ್ಮವರು ಮಸಿ ಬಳಿದರು, ಅದರ ಮಾರನೇ ದಿನ ಮಹಾರಾಷ್ಟ್ರದವರು ಮಸಿ ಬಳಿದರು ಎರಡೂ ರಾಜ್ಯಕ್ಕೆ ಇದರಿಂದ ನಷ್ಟ ಆಗುತ್ತದೆ. ಸಾರ್ವಜನಿಕರಿಗೂ ತೊಂದರೆ ಹಾಗೂ ಇಲಾಖೆಗೂ ನಷ್ಟ ಆಗುತ್ತದೆ. ಶಿವಸೇನೆಯಂತಹ ಪಕ್ಷ ಇಂತಹ ಕೆಲಸಗಳಿಗೆ ಬೆಂಬಲ ನೀಡಬಾರದು.
ಇದೊಂದು ಸಣ್ಣ ಕಾರಣಕ್ಕೆ ಆಗಿದೆ. ಶಿವಸೇನೆಯವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಅಂತವರ ಮೇಲೆ ಕ್ರಮ ಕೈಗೊಳ್ಳಬೇಕು. ಬೆಳಗಾವಿಯಲ್ಲಿ ಎಂಇಎಸ್‌ನವರು ಗೂಂಡಾಗಿರಿ ಮಾಡವವರಿಗೆ ಬೆಂಬಲ ಕೊಟ್ಟರೆ ನಾವು ಕೇಸ್ ಹಾಕುತ್ತೇವೆ ಎಂದು ಎಚ್ಚರಿಸಿದರು.