ಪುಣೆ ಬಸ್ಸಿನೊಳಗೆ ಅತ್ಯಾಚಾರ ಪ್ರಕರಣ: ಆರೋಪಿ ಅರೆಸ್ಟ್
ಪುಣೆಯ ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ ಈತನನ್ನು ವಶಕ್ಕೆ ಪಡೆಯಲಾಗಿದೆ.
ಈಗಾಗಲೇ ಹಲವು ಪ್ರಕರಣಗಳು ಈತನ ಮೇಲೆ ದಾಖಲಾಗಿದ್ದು, ಈತ ಹಿಸ್ಟರಿ ಶೀಟರ್ ಆಗಿದ್ದಾನೆ. ಪುಣೆ ಮತ್ತು ಅಹಿಲ್ಯಾನಗರ ಜಿಲ್ಲೆಯಲ್ಲಿ ಈತನ ವಿರುದ್ದ ಆರಕ್ಕೂ ಹೆಚ್ಚು ಕಳ್ಳತನ, ದರೋಡೆ, ಸರಗಳವು ಪ್ರಕರಣಗಳಿವೆ. 2019ರಿಂದ ಈತ ಒಂದು ಪ್ರಕಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇದ್ದಾನೆ.
ಪ್ರಕರಣದ ಆರೋಪಿ ಪತ್ತೆಗೆ 13 ಪೊಲೀಸರ ತಂಡಗಳನ್ನ ರಾಜ್ಯದ ವಿವಿಧ ಸ್ಥಳದಲ್ಲಿ ನಿಯೋಜಿಸಲಾಗಿತ್ತು, ಅಂತಿಮವಾಗಿ ಆರೋಪಿಯನ್ನು ಬಂಧಿಸಲಾಗಿದೆ . ಶಿರೂರು ತಾಲೂಕಿನ ಕಬ್ಬಿನ ಗದ್ದೆಗಳಲ್ಲಿ ಗುರುವಾರ ಶೋಧ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಸ್ನಿಫರ್ ಡಾಗ್ ಮತ್ತು ಡ್ರೋನ್‌ಗಳನ್ನು ಸಹ ನಿಯೋಜಿಸಿದ್ದರು.
ಪ್ರಕರಣದಲ್ಲಿ ಮಹಿಳೆಯ ದೂರು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರಿಗೆ ಆರೋಪಿಯ ಸುಳಿವು ಪತ್ತೆಯಾಗಿತ್ತು. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗೆ ಬಲೆ ಬೀಸಿದ್ದ ಪೊಲೀಸರು ಈತನ ಸುಳಿವು ನೀಡಿದವರಿಗೆ 1 ಲಕ್ಷ ರೂ ಬಹುಮಾನವನ್ನು ಸಹ ಘೋಷಿಸಿದ್ದರು.