ಮುಡಾ ಹಗರಣ: ತನಿಖೆ ಮುಂದುವರೆಸಲು ಲೋಕಾಯುಕ್ತರಿಗೆ ಕೋರ್ಟ್ ಸೂಚನೆ
ಬೆಂಗಳೂರು: ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧದ ಬಿ ರಿಪೋರ್ಟ್ ವಿರೋಧಿಸಿ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಇಡಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಅಂತಿಮ ವರದಿ ಬಳಿಕ ಬಿ ರಿಪೋರ್ಟ್ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ನೇತೃತ್ವದ ಪೀಠ ಈ ಪ್ರಕರಣದಲ್ಲಿ ಮತ್ತಷ್ಟು ತನಿಖೆಗೆ ಆದೇಶಿಸಿದೆ, ಲೋಕಾಯುಕ್ತರು ತನಿಖೆ ಮುಂದುವರೆಸುವಂತೆ ಕೋರ್ಟ್ ಸೂಚಿಸಿದೆ.
ಈಗಾಗಲೇ ಮೈಸೂರು ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ನಾಲ್ವರ ತನಿಖೆ ನಡೆಸಿ, ಬಿ ರಿಪೋರ್ಟ್ ಸಲ್ಲಿಸಿದ್ದರು. ಇದೀಗ ಕೋರ್ಟ್ ಕೇವಲ ನಾಲ್ಕು ಮಂದಿಯದ್ದು ಅಲ್ಲ, ಪ್ರಕರಣದಲ್ಲಿ ಆರೋಪಿಗಳಾಗಿರುವ ಎಲ್ಲರ ವಿಚಾರಣೆ ನಡೆಸಿ ವರದಿ ಕೊಡಿ ಅಂತ ಸೂಚಿಸಿದೆ.
ಪೂರ್ತಿ ವರದಿ ನೀಡಿದ ಬಳಿಕ ಬಿ ರಿಪೋರ್ಟ್ ಅರ್ಜಿ ಆದೇಶ ನೀಡ್ತೀವಿ ಅಂತ ಹೇಳಿದೆ. ಇನ್ನು ಲೋಕಾಯುಕ್ತ ಬಿ ರಿಪೋರ್ಟ್ ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸಲು ಇಡಿಗೆ ಅವಕಾಶ ನೀಡಿದ್ದು, ಮೇ 7ರಂದು ಅಂತಿಮ ತೀರ್ಪು ನೀಡುವುದಾಗಿ ಹೇಳಿದೆ.