ಭಯೋತ್ಪಾದಕ ದಾಳಿ: ವಿಮಾನ ನಿಲ್ದಾಣದಲ್ಲೇ ಜೈಶಂಕರ್, ಡೋಬಾಲ್ ಜೊತೆ ಪ್ರಧಾನಿ ಮೋದಿ ಸಭೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದ ದಾಳಿ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಕರ್ನಾಟಕದ ಅನೇಕ ಪ್ರವಾಸಿಗರ ಸ್ಥಿತಿ ಅತಂತ್ರವಾಗಿದೆ. ರಾಜ್ಯದ ಇಬ್ಬರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಈ ಮಧ್ಯೆ, ಮಾಹಿತಿ ಪಡೆದ ಪ್ರಧಾನಿ ಮೋದಿ ಸೌದಿ ಪ್ರವಾಸವನ್ನ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ.
ನಿಗದಿತ ವೇಳಾಪಟ್ಟಿಯಂತೆ ಮೋದಿ ಬುಧವಾರ ರಾತ್ರಿ ನವದೆಹಲಿಗೆ ಮರಳಬೇಕಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಹಿನ್ನೆಲೆ ಅವರು ಮುಂಚಿತವಾಗಿ ದೇಶಕ್ಕೆ ವಾಪಸ್ ಆಗಿದ್ದಾರೆ. ಮೋದಿ, ತಮಗಾಗಿ ಏರ್ಪಡಿಸಿದ್ದ ಅಧಿಕೃತ ಔತಣಕೂಟವನ್ನು ಬಿಟ್ಟು ತಮ್ಮ ಪ್ರವಾಸ ಮೊಟಕುಗೊಳಿಸಿ ಮಂಗಳವಾರ ರಾತ್ರಿ ದೇಶಕ್ಕೆ ಮರಳಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರ ತ್ವರಿತ ಮರಳುವಿಕೆ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು, ರಾಯಲ್ ಪ್ಯಾಲೇಸ್ಗೆ ಭೇಟಿ ನೀಡಿ ಸೌದಿ ನಾಯಕರಿಗೆ ಮಾಹಿತಿ ನೀಡಿದ್ದಾರೆ. ಸೌದಿ ನಾಯಕರೂ ಕೂಡ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಭಾರತಕ್ಕೆ ಮರಳಿದ್ದು, ಈ ಬಗ್ಗೆ ಸೌದಿ ಆಡಳಿತಕ್ಕೆ ಮಾಹಿತಿ ನೀಡಲಾಗಿದೆ. ಸೌದಿ ರಾಜಕುಮಾರ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು, ಭಾರತಕ್ಕೆ ಯಾವುದೇ ಸಹಾಯ ಮಾಡಲು ಸಿದ್ಧ ಎಂದು ಭರವಸೆ ನೀಡಿದ್ದಾರೆ.