ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕನ್ನಡಿಗರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಕಾಶ್ಮೀರದ ಪೆಹಲ್ಗಾಮನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕನ್ನಡಿಗರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರವನ್ನು ಘೋಷಿಸಲಾಗಿದೆ. ಸಂಕಷ್ಟದಲ್ಲಿರುವ ಕನ್ನಡಿಗರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಬೆಂಗಳೂರಿನ ಮತ್ತೀಕೆರೆಯಲ್ಲಿರುವ ಭರತ್ ಭೂಷಣ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಭರತ್ ಭೂಷಣ್ ಅವರಿಗೆ ಕನ್ನಡ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸಿದ ಮುಖ್ಯಮಂತ್ರಿಗಳು, ಉತ್ತಮ ಶಿಕ್ಷಣ ಪಡೆದಿದ್ದ ತರುಣರಾಗಿದ್ದ ಭರತ್ ಭೂಷಣ್ ಅವರು ಉಗ್ರರ ದಾಳಿಗೆ ಬಲಿಯಾಗಿರುವುದು ದುರದೃಷ್ಟಕರ. ಉಗ್ರರ ದಾಳಿ ಅಮಾನವೀಯವಾದ ಕೃತ್ಯವಾಗಿ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಕನ್ನಡಿಗರಾದ ಭರತ್ ಭೂಷಣ್ , ಮಂಜುನಾಥ್ ರಾವ್ ಹಾಗೂ ಬೆಂಗಳೂರಿನಲ್ಲಿ ನೆಲಿಸಿದ್ದ ಮಧುಸೂದನ್ ಅವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಭರತ್ ಭೂಷಣ್ ಕುಟುಂಬದೊಂದಿಗೆ ಸಚಿವ ರಾಮಲಿಂಗಾರೆಡ್ಡಿಯವರನ್ನು ಹಾಗೂ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಕುಟುಂಬದವರನ್ನು ಸಚಿವ ಮಧುಬಂಗಾರಪ್ಪ ಅವರು ಭೇಟಿಯಾಗಿದ್ದು, ಕುಟುಂಬಕ್ಕೆ ಸಹಕಾರ ನೀಡುವಂತೆ ಸೂಚನೆ ನೀಡಲಾಗಿದೆ. ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ತಲಾ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದು, ಕುಟುಂಬಕ್ಕೆ ಸರ್ಕಾರದ ಬೆಂಬಲವಿದೆ ಎಂದರು.