ಹಾಲಿನ ಕೆನೆಯ ಫೇಸ್ ಪ್ಯಾಕ್ ಹಚ್ಚಿದರೆ ನಿಮ್ಮ ಮುಖ ಆಕರ್ಷಕವಾಗಿ ಹೊಳೆಯುತ್ತದೆ!
ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್‍ಗಳು ಚರ್ಮದ ಆರೈಕೆಗೆ ಸಹಾಯ ಮಾಡುತ್ತವೆ. ಹಾಲಿನಲ್ಲಿ ಸಿಗುವ ನೈಸರ್ಗಿಕ ಕೆನೆಯು ಕೊಬ್ಬು ಮತ್ತು ಪ್ರೋಟೀನ್‍ಗಳಿಂದ ಸಮೃದ್ಧವಾಗಿರುತ್ತದೆ. ವಿಶೇಷವಾಗಿ ಚರ್ಮದ ಶುಷ್ಕತೆ, ಸುಕ್ಕು, ಅಕಾಲಿಕ ವಯಸ್ಸಾದ ಚಿಹ್ನೆ ಹಾಗೂ ಮಂಕಾದ ಸ್ಥಿತಿಯನ್ನು ನಿವಾರಿಸುವುದು. ಕೆನೆಯಿಂದ ಚರ್ಮದ ಆರೈಕೆ ಮಾಡುವುದರಿಂದ ಚರ್ಮವು ಪುನಃಶ್ಚೇತನ ಪಡೆದುಕೊಳ್ಳುವುದು. ಚರ್ಮದ ಆಳದಿಂದ ಪೋಷಣೆ ನೀಡುವ ಮೂಲಕ ವಯಸ್ಸಾದ ಚಿಹ್ನೆ, ಸುಕ್ಕು, ಗೆರೆ ಸೇರಿದಂತೆ ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ.
ಅದಲ್ಲದೆ ಹಿಂದಿನ ಕಾಲದಲ್ಲಿ ಹಾಲಿನ ಕೆನೆ ಬ್ಯೂಟಿ ಪ್ರಾಡಕ್ಟ್ ಗಳಲ್ಲಿ ಒಂದಾಗಿತ್ತು. ಚರ್ಮದಲ್ಲಿ ಶುಷ್ಕತೆ ಕಂಡುಬಂದರೆ ಮೊದಲು ಉಪಯೋಗಿಸುತ್ತಿದದ್ದು ಇದನ್ನೇ. ನ್ಯಾಚುರಲ್ಲಾಗಿ ಮುಖ ಹೊಳೆಯುವಂತೆ ಮಾಡುವ ಪರಿಣಾಮಕಾರಿ ಅಗ್ಗದ ಮನೆಮದ್ದು ಈ ಹಾಲಿನ ಕೆನೆ.
ಆದರೆ ಈಗೀಗ ವಿವಿಧ ಕಾರಣಗಳಿಗಾಗಿ ಹಾಲಿನ ಕೆನೆ ಬಳಸುವುದನ್ನೇ ಜನ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಹಾಲಿನ ಕೆನೆಯಲ್ಲಿ ಎಂತಹ ಅದ್ಭುತ ಗುಣಗಳಿವೆ ಎಂಬುದು ನಿಮಗೆ ಗೊತ್ತಿಲ್ಲ. ಚರ್ಮ ಹೊಳೆಯು ವಂತೆ ಮಾಡಲು, ಮುಖದ ಮೇಲಿನ ಗುಳ್ಳೆಗಳನ್ನು ತೆಗೆದುಹಾಕಲು, ತ್ವಚೆ ಮೃದುವಾಗಿಡಲು ಹಾಲಿನ ಕೆನೆ ಸಹಕಾರಿ.
ಪ್ರತಿದಿನ ಹಾಲಿನ ಕೆನೆ ಬಳಸುವ ಅಭ್ಯಾಸವನ್ನು ನೀವು ಬೆಳೆಸಿಕೊಂಡರೆ, ನಿಮ್ಮ ಮುಖದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುವುದನ್ನು ನೀವು ಗಮನಿಸಬಹುದು. ಬರೀ ಹಾಲಿನ ಕೆನೆ ಮಾತ್ರವಲ್ಲದೆ ಅದನ್ನು ಇತರ ಪದಾರ್ಥಗಳೊಂದಿಗೆ ಫೇಸ್ ಮಾಸ್ಕ್ ರೂಪದಲ್ಲಿ ಮುಖದ ಸೌಂದರ್ಯ ಹೆಚ್ಚಿಸಲು ಬಳಸಬಹುದು. ಹಾಗಾದರೆ ಮುಖಕ್ಕೆ ಹಾಲಿನ ಕೆನೆಯನ್ನು ಹೇಗೆಲ್ಲಾ ಬಳಸಬಹುದು. ಮನೆಯಲ್ಲಿ ತಯಾರಿಸಿಬಹುದಾದ ಹಾಲಿನ ಕೆನೆಯ ಕೆಲವು ಅತ್ಯುತ್ತಮ ಫೇಸ್ ಪ್ಯಾಕ್ ಗಳು ಯಾವುದೆಂದೂ ನೋಡೋಣ…
ತ್ವಚೆ ಹೊಳೆಯುವಂತೆ ಮಾಡಲು
ಸಾಮಾನ್ಯ ಚರ್ಮದವರಿಗೆ ಈ ಫೇಸ್ ಪ್ಯಾಕ್ ಬಹಳ ಒಳ್ಳೆಯದು. ಒಂದು ಚಮಚ ಶ್ರೀಗಂಧದ ಪುಡಿಗೆ ಎರಡು ಚಮಚ ಹಾಲಿನ ಕೆನೆ, ಒಂದು ಚಮಚ ಕಡಲೆಹಿಟ್ಟು, ಒಂದು ಚಿಟಿಕೆ ಅರಿಶಿನ ಮತ್ತು ಕೆಲವು ಹನಿ ಗುಲಾಬಿ ನೀರನ್ನು ಸೇರಿಸಿ. ನಂತರ ಗಟ್ಟಿಯಾಗಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಪೂರ್ತಿಯಾಗಿ ಹಚ್ಚಿ ಮೃದುವಾಗಿ ಉಜ್ಜಿ. ನಂತರ 10 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ನೀರಿನಲ್ಲಿ ಮುಖ ತೊಳೆಯಿರಿ.
ತುರಿಕೆ ಸಮಸ್ಯೆ ಮಾಯ
ನಿಮಗೆ ಮುಖದ ಮೇಲೆ ಅಲರ್ಜಿಯಾದಂತೆ, ತುರಿಕೆಯಾದಂತೆ ಕಂಡುಬಂದರೆ ನಾಲ್ಕು ಚಮಚ ಹಾಲಿನ ಕೆನೆಯನ್ನು ಎರಡು ಚಮಚ ರೋಸ್ ವಾಟರ್ ನೊಂದಿಗೆ ಬೆರೆಸಿ. ಸ್ನಾನಕ್ಕೆ ಹೋಗುವ ಮೊದಲು ಕಾಲು, ತೋಳು ಮತ್ತು ಮುಖದ ಮೇಲೆ ಹಚ್ಚಿ. ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಬೆಳ್ಳಗಿನ ತ್ವಚೆ ಪಡೆಯಲು
ಒಂದು ಟೀ ಚಮಚ ಜೇನುತುಪ್ಪ, ಒಂದು ಚಮಚ ಹಾಲಿನ ಕೆನೆಯೊಂದಿಗೆ ಚಿಟಿಕೆಯಷ್ಟು ಕೇಸರಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ. ನಂತರ ತೊಳೆಯಿರಿ. ಸುಂದರವಾದ ಬೆಳ್ಳಗಿನ ತ್ವಚೆ ಪಡೆಯಲು ಇದು ಅತ್ಯಂತ ಪರಿಣಾಮಕಾರಿ ಫೇಸ್ ಪ್ಯಾಕ್ .
ತ್ವಚೆಯ ಮೇಲಿನ ಕಲೆ ತೆಗೆಯುತ್ತದೆ
ಈ ಫೇಸ್ ಪ್ಯಾಕ್ ಆಗಾಗ ಮಾಡಿಕೊಳ್ಳುತ್ತಿದ್ದರೆ ನೀವು ವಯಸ್ಸಾದವರ ತರಹ ಕಾಣವುದೇ ಇಲ್ಲ. ಅಷ್ಟೇ ಅಲ್ಲ, ತ್ವಚೆಯ ಮೇಲಿನ ಗುಳ್ಳೆ, ಕಲೆ ತೆಗೆಯಲು ಇದು ಸಹಾಯ ಮಾಡುತ್ತದೆ. ಒಂದು ಚಮಚ ಜೇನುತುಪ್ಪವನ್ನು ಒಂದು ಚಮಚ ಹಾಲಿನ ಕೆನೆಯೊಂದಿಗೆ ಬೆರೆಸಿ. ಬೇಕಾದರೆ ಒಂದು ಟೀಚಮಚ ನಿಂಬೆ ರಸವನ್ನು ಕೂಡ ಸೇರಿಸಬಹುದು. ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಇದನ್ನು 15 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ.
ಕ್ಲಿಯರ್ ಸ್ಕಿನ್ ಪಡೆಯಲು
ಒಂದು ಚಮಚ ಹಾಲಿನ ಕೆನೆಗೆ ಒಂದು ಟೀ ಚಮಚ ಓಟ್ಸ್, ಒಂದು ಚಮಚ ಅರಿಶಿನ ಮತ್ತು ಒಂದು ಚಮಚ ರೋಸ್ ವಾಟರ್ ಬೆರೆಸಿ. ಈ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ, ಐದು ನಿಮಿಷಗಳ ಕಾಲ ವೃತ್ತಾಕಾರವಾಗಿ ನಿಧಾನವಾಗಿ ಉಜ್ಜಿ. ಇದನ್ನು 15 ನಿಮಿಷಗಳ ಕಾಲ ಹಾಗೆ ಬಿಡಿ, ನಂತರ ತೊಳೆಯಿರಿ.
ಮೊಡವೆಯ ಕಲೆ ನಿವಾರಣೆಗೆ
ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಯ ಮೇಳಿರುವ ಮೊಡವೆ, ಮೊಡವೆಯ ಕಲೆಗಳನ್ನು ತೆಗೆದುಹಾಕುತ್ತದೆ. ಮೊದಲು ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ನಂತರ ಪುಡಿ ತಯಾರಿಸಿ. ಈ ಕಿತ್ತಳೆ ಸಿಪ್ಪೆಯ ಪುಡಿಯನ್ನು ಎರಡು ಚಮಚ ತೆಗೆದುಕೊಂಡು ಒಂದು ಚಮಚ ಹಾಲಿನ ಕೆನೆಯೊಂದಿಗೆ ಬೆರೆಸಿ. ಇದನ್ನು ಚೆನ್ನಾಗಿ ಬೆರೆಸಿದ ನಂತರ ಮುಖಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ವಾರಕ್ಕೆ ಎರಡು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.