ಕರ್ನಾಟಕ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ – ಆಗಸ್ಟ್ 11ರಿಂದ ಆರಂಭ
ಬೆಂಗಳೂರು: ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಶ್ಚಯವಾಗಿದ್ದು, ಆಗಸ್ಟ್ 11ರಿಂದ ಅಧಿವೇಶನ ಆರಂಭವಾಗಲಿದೆ. ಈ ಕುರಿತು ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ. ಶ್ರೀಧರ್ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಅಧಿವೇಶನವು ಆಗಸ್ಟ್ 11ರಿಂದ ಆಗಸ್ಟ್ 22ರವರೆಗೆ ನಡೆಯಲಿದ್ದು, ಒಟ್ಟು 12 ದಿನಗಳಲ್ಲಿ 8 ಕಾರ್ಯದಿನಗಳಲ್ಲಿ ಸಭೆಗಳು ನಡೆಯಲಿವೆ.
ಆಗಸ್ಟ್ 11ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮುಂಗಾರು ಅಧಿವೇಶನದಲ್ಲಿ ರಾಜ್ಯದ ಮಹತ್ವದ ಜನಜೀವನ ಸಂಬಂಧಿತ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಕರ್ನಾಟಕ ರೋಹಿತ್ ವೇಮುಲಾ ಮಸೂದೆ, ಕರ್ನಾಟಕ ತಪ್ಪು ಮಾಹಿತಿ, ಸುಳ್ಳು ಸುದ್ದಿ ನಿಷೇಧ ಮಸೂದೆ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ಮಸೂದೆ ಸೇರಿದಂತೆ ಹಲವು ಮಸೂದೆಗಳು ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ.