ಸ್ಯಾಂಡಲ್ ವುಡ್ ನ ಯುವ ನಟ ಸಂತೋಷ್ ಬಾಲರಾಜ್ ನಿಧನ
ಕನ್ನಡ ಚಿತ್ರರಂಗದ ಯುವ ನಟ ಸಂತೋಷ್ ಬಾಲರಾಜ್ (38) ಅವರು ಅನಾರೋಗ್ಯದಿಂದ ಇಂದು ನಿಧನರಾದರು. ಕಳೆದ ಹಲವು ದಿನಗಳಿಂದ ಅವರು ಜಾಂಡೀಸ್ ಹಾಗೂ ಲಿವರ್ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ಬೆಂಗಳೂರು ಬನಶಂಕರಿಯಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದರೂ ಅವರು ಸ್ಪಂದಿಸದೆ, ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಾಂಡೀಸ್ ಇತರ ಅಂಗಾಂಗಗಳನ್ನೂ ಪರಿಣಾಮಿತಗೊಳಿಸಿದ್ದರಿಂದ, ಕಳೆದ ಎರಡು ದಿನಗಳಿಂದ ಅವರನ್ನು ವೆಂಟಿಲೇಟರ್ನಲ್ಲಿಟ್ಟು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಹಿಂದೆಯೂ ಅವರು ಈ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದರು, ಆದರೆ ಈ ಬಾರಿ ಆರೋಗ್ಯದಲ್ಲಿ ಏರುಪೇರು ಗಂಭೀರವಾಗಿದ್ದರಿಂದ ಸ್ಥಿತಿ ಕೈ ಮೀರಿ ಹೋಗಿತ್ತು. ಸಂತೋಷ್ ಬಾಲರಾಜ್ ಅವರು ‘ಕರಿಯ 2’, ‘ಗಣಪ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.