ವಿಷ್ಣು ಸಮಾಧಿ ನೆಲಸಮಗೊಳಿಸಿದ್ದ “ಅಭಿಮಾನ್ ಸ್ಟುಡಿಯೋ” ಜಾಗ ಅರಣ್ಯ ಪ್ರದೇಶ ಎಂದು ಘೋಷಣೆ!
ಅಭಿಮಾನ್ ಸ್ಟುಡಿಯೋ ಸ್ಥಳದಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ಬಾಲಣ್ಣನ ಕುಟುಂಬದವರು ಧ್ವಂಸ ಮಾಡಿದ್ದಾರೆ. ವಿಷ್ಣುವರ್ಧನ್ ಅಂತ್ಯಕ್ರಿಯೆ ಆ ಸ್ಥಳದಲ್ಲಿ ಆದಾಗಿನಿಂದಲೂ ಆ ಜಾಗ ವಿವಾದದಲ್ಲಿಯೇ ಇದೆ. ಇದೀಗ ಹದಿನೈದು ವರ್ಷಗಳಿಂದ ಚಾಲನೆಯಲ್ಲಿದ್ದ ಈ ಹೋರಾಟಕ್ಕೆ ಫಲ ಸಿಕ್ಕಿದ್ದು, ಸರ್ಕಾರವು ಈ ಜಾಗವನ್ನು ಅರಣ್ಯಭೂಮಿ ಎಂದು ಘೋಷಿಸಿ, ಅಭಿಮಾನ್ ಸ್ಟುಡಿಯೋ ಮಾಲೀಕರಿಂದ ಭೂಮಿಯನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿದೆ.
ಹೌದು ಆಗಸ್ಟ್ 22ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಅವರು ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ನಿಯಮ ಉಲ್ಲಂಘನೆ ಬಗ್ಗೆ ಉಲ್ಲೇಖಿಸಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಬಾಲಕೃಷ್ಣ ಅವರಿಗೆ 1970ರಲ್ಲಿ ಸ್ಟುಡಿಯೋ ನಿರ್ಮಾಣದ ಉದ್ದೇಶಕ್ಕೆ 20 ಎಕರೆ ಭೂಮಿಯನ್ನು 20 ವರ್ಷ ಲೀಸ್ಗೆ ನೀಡಾಗಿತ್ತು. ನಂತರ ಲೀಸ್ ಅವಧಿ ವಿಸ್ತರಣೆ ಮಾಡಿಕೊಳ್ಳಲಾಯಿತು. 2004ರಲ್ಲಿ ಆರ್ಥಿಕ ಸಂಕಷ್ಟದ ನೆಪ ಹೇಳಿ ಬಾಲಕೃಷ್ಣ ಮಕ್ಕಳಾದ ಶ್ರೀನಿವಾಸ್ ಹಾಗೂ ಗಣೇಶ್ ಜಿಲ್ಲಾಧಿಕಾರಿಗಳ ಬಳಿ 10 ಎಕರೆ ಮಾರಲು ಒಪ್ಪಿಗೆ ಕೇಳಿದ್ದರು ಎನ್ನಲಾಗಿದೆ. ಜಿಲ್ಲಾಧಿಕಾರಿಗಳ ವಿಶೇಷ ಅಧಿಕಾರ ಬಳಸಿ ಇದ್ದನ್ನು ಮಾರಲಾಯಿತು ಎನ್ನಲಾಗಿದೆ. ಮಾರಾಟದಿಂದ ಬಂದ ಹಣವನ್ನು ಸ್ಟುಡಿಯೋ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಿಕೊಳ್ಳೋದಾಗಿ ಅವರು ಸರ್ಕಾರಕ್ಕೆ ಹೇಳಿದ್ದರು.
ಆದರೆ, ಈವರೆಗೆ ಸ್ಟುಡಿಯೋ ಯಥಾ ಸ್ಥಿತಿಯಲ್ಲೇ ಇದೆ. ಈವರೆಗೆ ಇದರ ಅಭಿವೃದ್ಧಿ ಆಗಿಲ್ಲ. ಈಗ ಬಾಲಕೃಷ್ಣ ಮೊಮ್ಮಗ ಕಾರ್ತಿಕ್ ಅವರು ಈ ಜಮೀನನ್ನು ಮಾರಲು ಪ್ಲ್ಯಾನ್ ಮಾಡಿದ್ದರು. 1 ಎಕರೆಗೆ 14 ಕೋಟಿ ರೂಪಾಯಿಯಂತೆ ಮಾರಲು ಪ್ಲ್ಯಾನ್ ನಡೆದಿತ್ತು. ಈ ವಿಚಾರ ಅರಣ್ಯಾಧಿಕಾರಿಗೆ ಗೊತ್ತಾಗಿದೆ. ಹೀಗಾಗಿ, ಇದನ್ನು ವಶಕ್ಕೆ ಪಡೆಯುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.