ಓಲಾ ಕಂಪನಿ ಸಿಬ್ಬಂದಿ ಅನುಮಾನಾಸ್ಪದ ಸಾವು – ಮೂವರ ವಿರುದ್ಧ ದೂರು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯೊಬ್ಬ ಉದ್ಯೋಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೃತನನ್ನು ಕೆ. ಅರವಿಂದ್ ಎಂದು ಗುರುತಿಸಲಾಗಿದ್ದು, ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ಕಂಪನಿಯ ಹೋಮೋಲೊಗೇಷನ್ ಇಂಜಿನಿಯರ್ ಸುಬ್ರತ್ ಕುಮಾರ್ ದಾಸ್ ಸೇರಿದಂತೆ ಮೂವರ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೊದಲಿಗೆ ಪ್ರಕರಣವನ್ನು ಯೂಡಿಆರ್ (Unnatural Death Report) ಆಗಿ ದಾಖಲಿಸಲಾಗಿತ್ತು. ನಂತರ ಅರವಿಂದ್ ಅವರ ಕೋಣೆಯಿಂದ 28 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಕೆಲಸದ ಸ್ಥಳದಲ್ಲಿ ಕಿರುಕುಳ, ಮಾನಸಿಕ ಒತ್ತಡ ಹಾಗೂ ವೇತನ ನಿಲ್ಲಿಸುವ ವಿಚಾರಗಳ ಉಲ್ಲೇಖವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿನ ನಂತರ ಕಂಪನಿಯು ₹17 ಲಕ್ಷ ಹಣವನ್ನು ಅರವಿಂದ್ ಅವರ ಖಾತೆಗೆ ಜಮಾ ಮಾಡಿದ್ದು, ಪ್ರಕರಣದ ಕುರಿತು ಹೊಸ ಅನುಮಾನಗಳಿಗೆ ಕಾರಣವಾಗಿದೆ.
ಮೃತ ಅರವಿಂದ್ ಅವರ ಸಹೋದರ ಅಶ್ವಿನ್ ಕಣ್ಣನ್ ಅವರು ನೀಡಿದ ದೂರು ಪ್ರಕಾರ, ಕಂಪನಿ ಹಣಕಾಸು ವ್ಯವಹಾರಗಳ ತಪ್ಪುಗಳನ್ನು ಮರೆಮಾಚಲು ಅರವಿಂದ್ ಮೇಲೆ ಒತ್ತಡ ಹಾಕಿದ್ದರೆಂದು ಆರೋಪಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.