ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು
ಜಾರ್ಖಂಡ್: ರಾಜ್ಯದ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚೈಬಾಸಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ರಕ್ತ ವರ್ಗಾವಣೆ ಮಾಡಿದ ನಂತರ ಕನಿಷ್ಠ ಐದು ಮಕ್ಕಳಿಗೆ ಎಚ್‌ಐವಿ (HIV) ಸೋಂಕು ದೃಢಪಟ್ಟಿದೆ ಎಂಬ ವರದಿ ಹೊರಬಿದ್ದಿದೆ.
ಘಟನೆಯ ಪ್ರಾಥಮಿಕ ಮಾಹಿತಿ ಪ್ರಕಾರ, ಏಳು ವರ್ಷದ ಥಲಸ್ಸೆಮಿಯಾ ರೋಗಿ ಮಗುವಿಗೆ ಚೈಬಾಸಾ ಸದರ್ ಆಸ್ಪತ್ರೆಯ ರಕ್ತ ನಿಧಿಯಿಂದ ಎಚ್‌ಐವಿ ಸೋಂಕಿತ ರಕ್ತವನ್ನು ನೀಡಲಾಗಿದೆ ಎಂದು ಕುಟುಂಬದವರು ದೂರನ್ನು ಸಲ್ಲಿಸಿದ್ದರು. ಇದೇ ಪ್ರಕರಣದ ತನಿಖೆ ವೇಳೆ, ಅದೇ ಆಸ್ಪತ್ರೆಯಲ್ಲಿ ರಕ್ತ ಪಡೆದ ಮತ್ತೂ ನಾಲ್ಕು ಮಕ್ಕಳು ಎಚ್‌ಐವಿ ಪಾಸಿಟಿವ್ ಎಂದು ಪತ್ತೆಯಾಗಿದೆ.
ಈ ಬೆಳವಣಿಗೆ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಆಕ್ರೋಶ ಮತ್ತು ಆತಂಕ ಉಂಟುಮಾಡಿದೆ. ಜಾರ್ಖಂಡ್ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ದು, ಆರೋಗ್ಯ ಸೇವೆಗಳ ನಿರ್ದೇಶಕ ಡಾ. ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಐದು ಸದಸ್ಯರ ವೈದ್ಯಕೀಯ ತನಿಖಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಶನಿವಾರ ನಡೆದ ಪ್ರಾಥಮಿಕ ತನಿಖೆಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಪೀಡಿತ ಮಕ್ಕಳ ಸಂಖ್ಯೆ ಐದಕ್ಕೆ ಏರಿದೆ ಎಂದು ವರದಿಯಾಗಿದೆ. ಎಲ್ಲ ಮಕ್ಕಳು ಚೈಬಾಸಾದ ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪಡೆದಿರುವುದು ದೃಢಪಟ್ಟಿದೆ.
ಆರೋಗ್ಯ ಇಲಾಖೆ ಈ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಿ, ಜವಾಬ್ದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.






