ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!
ನವದೆಹಲಿ: ದೇಶದಲ್ಲಿ ಜನರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ನ.6 ಹಾಗೂ ನ.11ರಂದು ಎರಡು ಹಂತದಲ್ಲಿ ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಬಾರಿ ಬಿಹಾರದಲ್ಲಿ ದಾಖಲೆಯ ಮತದಾನವಾಗಿದ್ದು, ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಕಾದು ನೋಡಬೇಕಿದೆ. 243 ಸ್ಥಾನಗಳ ಎರಡು ಹಂತಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ 46 ಮತಗಟ್ಟೆಗಳಲ್ಲಿ ಪ್ರಾರಂಭವಾಗಿದೆ.
ಬಿಹಾರದಲ್ಲಿ NDA ಶತಕ ಬಾರಿಸಿ ಮುನ್ನುಗ್ಗುತ್ತಿದ್ದು, NDA ಮೈತ್ರಿಕೂಟ 192 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಬೆಳಗ್ಗೆ 11:15ರ ಟ್ರೆಂಡ್ ಪ್ರಕಾರ ಒಟ್ಟು 243 ಕ್ಷೇತ್ರಗಳಲ್ಲಿ ಎನ್‌ಡಿಎ (NDA) 192, ಮಹಾಘಟಬಂಧನ್ 46, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಪಕ್ಷವಾರು ಲೆಕ್ಕ ತೆಗೆದುಕೊಂಡರೆ ಬಿಜೆಪಿ (BJP) 83, ಜೆಡಿಯು 80, ಆರ್‌ಜೆಡಿ 34, ಕಾಂಗ್ರೆಸ್ 5, ಇತರ ಪಕ್ಷಗಳು 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ರಾಜ್ಯದ 38 ಜಿಲ್ಲೆಗಳ 243 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇದೇ ವೇಳೆ, 6 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 8 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆಯೂ ಆರಂಭವಾಗಿದೆ.






