ಸರ್ಫೆಸಿ ಕಾಯ್ದೆಗೆ ಪರಿಹಾರ; ದಿಲ್ಲಿಗೆ ನಿಯೋಗ ಬನ್ನಿ: ಹೆಚ್.ಡಿ. ಕುಮಾರಸ್ವಾಮಿ ಸಲಹೆ
ಚಿಕ್ಕಮಗಳೂರು: ರಾಜ್ಯದ ಕಾಫಿ ಬೆಳೆಗಾರರನ್ನು ಕಂಗಾಲು ಮಾಡಿರುವ ಸರ್ಫೆಸಿ ಕಾಯ್ದೆ ಬಗ್ಗೆ ಪರಿಹಾರ ಕಂಡುಕೊಳ್ಳಲು ನವದೆಹಲಿಗೆ ನಿಯೋಗ ಬನ್ನಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಲಹೆ ಮಾಡಿದರು. ಬಾಳೆಹೊನ್ನೂರು ಪಟ್ಟಣದಲ್ಲಿರುವ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ (Central coffee reserch institute -CCRI) ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಮಾತನಾಡಿದರು.
2002ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ SARFAESI: ಸೆಕ್ಯುರಿಟೈಸೇಶನ್ ಮತ್ತು ಹಣಕಾಸು ಆಸ್ತಿಗಳ ಪುನರ್ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಕಾಯಿದೆ ಕಾಫಿ ಬೆಳೆಗಾರರಿಗೆ ಮರಣಶಾಸನವಾಗಿದೆ ಎಂದು ಕಾಫಿ ಬೆಳೆಗಾರರು ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು; ದೆಹಲಿಗೆ ನಿಯೋಗ ಬನ್ನಿ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಭೇಟಿಗೆ ನಾನು ಅವಕಾಶ ತೆಗೆದುಕೊಳ್ಳುತ್ತೇನೆ. ನಿಮ್ಮ ಪರವಾಗಿ ಸಚಿವರಿಗೆ ಮನವಿ ಮಾಡುತ್ತೇನೆ ಎಂದರು.
ಈ ಕಾಯ್ದೆಯ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಈ ಕಾರ್ಯಕ್ರಮಕ್ಕೆ ಬರುವಾಗ ದಾರಿಯಲ್ಲಿ ನನ್ನ ವಾಹನವನ್ನು ನಿಲ್ಲಿಸಿದ ಯುವಕನೊಬ್ಬ ಇದರ ಬಗ್ಗೆ ತಿಳಿಸಿ, ಇದೊಂದು ಕರಾಳ ಕಾಯ್ದೆ ಆಗಿದ್ದು ಇದರಿಂದ ಕಾಫಿ ಬೆಳೆಗಾರರನ್ನು ಪಾರು ಮಾಡುವಂತೆ ಮನವಿ ಮಾಡಿದ. ಅನಂತರ ಈ ಕಾಯ್ದೆಯ ಬಗ್ಗೆ ಮಾಹಿತಿ ಪಡೆದುಕೊಂಡೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಎರಡು ಅಥವಾ ಮೂರು ತಿಂಗಳ ಸಾಲದ ಕಂತು ಪಾವತಿ ಮಾಡದಿದ್ದರೆ ಬ್ಯಾಂಕುಗಳು ಜಾಗತಿಕವಾಗಿ ಸಾಲಗಾರರ ಆಸ್ತಿಗಳನ್ನು ಹರಾಜು ಮಾಡುತ್ತಿರುವ ಅನೇಕ ಉದಾಹರಣೆಗಳು ಇವೆ. ದೇಶ ವಿದೇಶದಲ್ಲಿರುವ ಯಾರೋ ಅನಾಮಿಕರು ಬಂದು ಈ ಕಾಯ್ದೆಯ ನೆರವಿನಿಂದ ನೂರಾರು ವರ್ಷಗಳಿಂದ ದುಡಿಮೆ ಮಾಡುತ್ತಿರುವ ಬೆಳೆಗಾರರ ಭೂಮಿಯನ್ನು ಕಡಿದುಕೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹಾಗೂ ಶಾಸಕ ರಾಜೇಗೌಡ ಅವರು ಕೇಂದ್ರ ಸಚಿವರ ಗಮನಕ್ಕೆ ತಂದರು.
ನೀವೆಲ್ಲರೂ ದೆಹಲಿಗೆ ಬನ್ನಿ. ಹಣಕಾಸು ಸಚಿವರ ಜತೆ ಚರ್ಚೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳೋಣ. ಅತಿ ಹೆಚ್ಚು ರಪ್ತು ಆಗುವ ಕಾಫಿಯಿಂದ ರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ವಿದೇಶ ವಿನಿಮಯ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ಕಾಫಿ ಉದ್ಯಮ ಮತ್ತು ಬೆಳೆಗಾರರನ್ನು ನಾವು ರಕ್ಷಣೆ ಮಾಡಬೇಕಿದೆ. ಅದಕ್ಕಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ಕಾಫಿ ತ್ಯಾಜ್ಯದಿಂದ ತಯಾರಿಸುವ ರಸಗೊಬ್ಬರವು ಭೂಮಿಗೆ ಉತ್ತಮ ಪೌಷ್ಠಿಕಾಂಶ ನೀಡುತ್ತದೆ. ಹೀಗಾಗಿ ಈ ರಸಗೊಬ್ಬರ ತಯಾರಿಕೆಗೆ ಬೃಹತ್ ಕೈಗಾರಿಕೆಯನ್ನು ಹಾಸನದಲ್ಲಿ ಸ್ಥಾಪನೆ ಮಾಡಬೇಕು ಎಂದು ಬೆಳೆಗಾರರು ನೀಡಿದ ಸಲಹೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಇದು ಉತ್ತಮ ಸಲಹೆ. ಹಾಸನಕ್ಕೆ ಹೆದ್ದಾರಿ, ರೈಲ್ವೆ ಸಂಪರ್ಕ ಇದೆ. ವಿಮಾನ ನಿಲ್ದಾಣವೂ ಬರುತ್ತಿದೆ. ಹೀಗಾಗಿ ಕಾಫಿ ರಸಗೊಬ್ಬರ ಕಾರ್ಖಾನೆಗೆ ಹಾಸನ ಸೂಕ್ತ ಜಾಗವಾಗಿದೆ. ಈ ಬಗ್ಗೆ ಸಂಬಂಧಿತ ಕೇಂದ್ರ ಸಚಿವರಾದ ಜೆ.ಪಿ. ನಡ್ದಾ ಅವರಲ್ಲಿಯೂ ಮನವಿ ಮಾಡುತ್ತೇನೆ. ಅವರ ಬಳಿಗೂ ಒಂದು ನಿಯೋಗ ಹೋಗೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದರು.






