ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಲು ಡಿ.ಕೆ. ಶಿವಕುಮಾರ್ ಮನವಿ
ನವದೆಹಲಿ: ನದಿ ಜೋಡಣೆ ಯೋಜನೆಯಲ್ಲಿ ನಮ್ಮ ರಾಜ್ಯಕ್ಕೆ ಕನಿಷ್ಠ 40-45 ಟಿಎಂಸಿ ನೀರನ್ನು ನೀಡಬೇಕು. ಗೋದಾವರಿ- ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು.
“ನದಿ ಜೋಡಣೆ ವಿಚಾರವಾಗಿ ಕೇಂದ್ರ ಜಲ ಶಕ್ತಿ ಸಚಿವರ ನೇತೃತ್ವದಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಯನ್ನು ರಚಿಸಲಾಗಿದ್ದು, ಎಲ್ಲಾ ರಾಜ್ಯಗಳು ಅದರ ಸದಸ್ಯರಾಗಿರುತ್ತವೆ. ಮಂಗಳವಾರ ಇದರ 24ನೇ ಸಭೆ ನಡೆದಿದ್ದು, ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಗೋದಾವರಿ ಹಾಗೂ ಕಾವೇರಿ, ಬೇಡ್ತಿ ಹಾಗೂ ವರದಾ ನದಿ ಜೋಡಣೆ ಬಗ್ಗೆ ಚರ್ಚೆ ನಡೆದಿದೆ” ಎಂದರು.
“ಗೋದಾವರಿ ಹಾಗೂ ಕಾವೇರಿ ನದಿ ಜೋಡಣೆ ಯೋಜನೆಯ ಮೊದಲ ಹಂತದಲ್ಲಿ 148 ಟಿಎಂಸಿ ನೀರನ್ನು ತಿರುಗಿಸಲಾಗುತ್ತಿದ್ದು, ಇದರಲ್ಲಿ ಕರ್ನಾಟಕಕ್ಕೆ ನಿಗದಿ ಮಾಡಿರುವುದು ಕೇವಲ 15.90 ಟಿಎಂಸಿ ನೀರು ಮಾತ್ರ. ನೀರನ್ನು ಯಾವ ಕಡೆ ನೀಡುತ್ತೀರಿ ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂಬ ಬೇಡಿಕೆ ಸಭೆಯ ಮುಂದಿಟ್ಟಿದ್ದೇವೆ. ಬೇಡ್ತಿ ಹಾಗೂ ವರದಾ ನದಿ ಜೋಡಣೆ ನಮ್ಮ ರಾಜ್ಯದೊಳಗೆ ಮಾಡಲಿದ್ದು, 18.50 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶ ಇದೆ. ಈ ಎರಡೂ ಯೋಜನೆಗಳಿಂದ ಕರ್ನಾಟಕಕ್ಕೆ ಒಟ್ಟು 34.40 ಟಿಎಂಸಿ ನೀರನ್ನು ನಿಗದಿ ಮಾಡಲಾಗಿದೆ. ಬೇಡ್ತಿ ಹಾಗೂ ವರದಾ ನದಿ ಜೋಡಣೆಗೆ ಡಿಪಿಆರ್ ತಯಾರಿಸಲು ನಾವು ಅನುಮತಿಯನ್ನು ನೀಡಿದ್ದೇವೆ. ಇದಕ್ಕೆ 10 ಸಾವಿರ ಕೋಟಿ ವೆಚ್ಚವಾಗಲಿದ್ದು, ಇದರಲ್ಲಿ 90% ಕೇಂದ್ರ ಸರ್ಕಾರ ಹಾಗೂ 10% ರಾಜ್ಯ ಸರ್ಕಾರ ಭರಿಸಲಿದೆ” ಎಂದು ಮಾಹಿತಿ ನೀಡಿದರು.
“ಸುಪ್ರೀಂ ಕೋರ್ಟ್ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಎರಡು ತಿಂಗಳಲ್ಲಿ ಸಲ್ಲಿಕೆ ಮಾಡುತ್ತೇವೆ ಎಂದು ಕೇಂದ್ರ ಸಚಿವರ ಬಳಿ ತಿಳಿಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾಗಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇನೆ. ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಇದರ ಸಂಬಂಧ ಈಗಾಗಲೇ ಎರಡು ಬಾರಿ ಸಭೆ ಮುಂದೂಡಲ್ಪಟ್ಟಿದೆ. ಮಹದಾಯಿ ವಿಚಾರವಾಗಿ ಅಧಿಕಾರಿಗಳು ಸಭೆ ಮಾಡಿದ್ದಾರೆ. ಈ ಯೋಜನೆ ವಿಚಾರದಲ್ಲಿ ಅರಣ್ಯ ಇಲಾಖೆ ಮೇಲೆ ಒತ್ತಡ ಹಾಕುವಂತೆ ಕೇಳಿದ್ದೇವೆ” ಎಂದರು.






