ಚಿತ್ರದುರ್ಗದಲ್ಲಿ ಬಸ್ ಭೀಕರ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ಗುರುವಾರ ನಸುಕಿನ ಜಾವ ಸುಮಾರು 2 ಗಂಟೆ ವೇಳೆಗೆ ಲಾರಿ ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಟ್ಟು ಆರು ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ.
ಸುಟ್ಟುಕರಕಲಾದ ಖಾಸಗಿ ಬಸ್‌ನಿಂದ ಐದು ಮೃತದೇಹಗಳು ಪತ್ತೆಯಾಗಿದ್ದು, ಕಂಟೈನರ್ ಲಾರಿಯ ಚಾಲಕನ ಮೃತದೇಹ ಸೇರಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಕಾರ್ಯ ಹಾಗೂ ತನಿಖೆ ಮುಂದುವರಿದಿದೆ.
ಈ ಕುರಿತು ಮಾಹಿತಿ ನೀಡಿದ ಐಜಿಪಿ ರವಿಕಾಂತೇಗೌಡ, “ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಬಳಿ ಲಾರಿ–ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರು ಕಡೆಯಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ, ಹಿರಿಯೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿ ಡಿವೈಡರ್ ಹತ್ತಿ ಡಿಕ್ಕಿ ಹೊಡೆದಿದೆ. ಬಹುಶಃ ಲಾರಿ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆದಿರಬಹುದು. ಪರಿಣಾಮ ಬೆಂಕಿ ಕಾಣಿಸಿಕೊಂಡು ಇಡೀ ಬಸ್ ಸುಟ್ಟುಹೋಗಿದೆ” ಎಂದು ತಿಳಿಸಿದರು.
ಅಪಘಾತದಲ್ಲಿ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚಿತ್ರದುರ್ಗ, ಹಿರಿಯೂರು, ಶಿರಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
“ಬಸ್ ಒಳಗೆ ಒಟ್ಟು ಐದು ಮೃತದೇಹಗಳು ಪತ್ತೆಯಾಗಿವೆ. ಲಾರಿ ಚಾಲಕನೂ ಸಾವನ್ನಪ್ಪಿದ್ದಾನೆ. ಮೃತರ ಗುರುತು ಇನ್ನೂ ಪತ್ತೆಯಾಗಬೇಕಿದೆ. ಮೂವರು ನಾಪತ್ತೆಯಾಗಿದ್ದು, ಅಪಘಾತದ ವೇಳೆ ಅವರು ಬಸ್‌ನಿಂದ ಇಳಿದು ಹೋಗಿರಬಹುದೆಂಬ ಅನುಮಾನವಿದೆ. ಇದು ಮುಂದಿನ ತನಿಖೆಯಲ್ಲಿ ಸ್ಪಷ್ಟವಾಗಲಿದೆ” ಎಂದು ಐಜಿಪಿ ಹೇಳಿದರು.
ಮಗು ಮೃತಪಟ್ಟಿರುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ವೈದ್ಯರು ದೃಢಪಡಿಸಬೇಕಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಗತ್ಯವಿದ್ದಲ್ಲಿ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.






