ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮಂಗಳವಾರ ರಾತ್ರಿ ಅರಮನೆಯ ಜಯಮಾರ್ತಂಡ ಗೇಟ್ ಬಳಿ ಬಲೂನ್‌ಗೆ ಗ್ಯಾಸ್ ತುಂಬುವ ವೇಳೆ ಈ ಭೀಕರ ಸ್ಫೋಟ ನಡೆದಿದೆ.
ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ, ಹೀಲಿಯಂ ಗ್ಯಾಸ್ ಸಿಲಿಂಡರ್ ಸಂಪೂರ್ಣವಾಗಿ ಛಿದ್ರ ಛಿದ್ರಗೊಂಡಿದೆ. ಈ ಅವಘಡದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೆಂಗಳೂರು ಮೂಲದ ಲಕ್ಷ್ಮಿ ಎಂಬುವರ ಸ್ಥಿತಿ ಗಂಭೀರವಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಂಜುಳಾ, ಕೋಲ್ಕತ್ತಾ ಮೂಲದ ಶಾಹಿನಾ ಶಬ್ಬಿರ್ ಹಾಗೂ ರಾಣೆಬೆನ್ನೂರು ಮೂಲದ ಕೊಟ್ರೇಶ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಮೈಸೂರು ಅರಮನೆ ಮುಂಭಾಗ ಪ್ರವಾಸಿಗರು ಹಾಗೂ ವ್ಯಾಪಾರಿಗಳಿಂದ ಕಿಕ್ಕಿರಿದಿತ್ತು. ಮಕ್ಕಳ ಪ್ರಮುಖ ಆಕರ್ಷಣೆಯಾಗಿರುವ ಹೀಲಿಯಂ ಬಲೂನ್ ಖರೀದಿಸಲು ಜನ ಸೇರಿದ್ದ ವೇಳೆ, ಬಲೂನ್‌ಗೆ ಗ್ಯಾಸ್ ತುಂಬುವಾಗ ಮೊದಲು ಬಲೂನ್ ಸಿಡಿದು, ತಕ್ಷಣವೇ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ಪರಿಣಾಮವಾಗಿ ಸಿಲಿಂಡರ್ ತುಂಡುಗಳು ಸುತ್ತಮುತ್ತ ಚದುರಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.
ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಕೂಗಳತೆ ದೂರದಲ್ಲಿದ್ದ ಕೆ.ಆರ್. ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು. ಸ್ಥಳದಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಮೈಸೂರು ಅರಮನೆ ಹಾಗೂ ನಗರದ ಸುತ್ತಮುತ್ತ ಹೀಲಿಯಂ ಬಲೂನ್ ಮಾರಾಟದ ಸುರಕ್ಷತೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.






