ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಗೊಂದಲಕಾರಿ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ನಡೆದ ಮಹತ್ವದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಬುರುಡೆ ಗ್ಯಾಂಗ್ ವಿಚಾರವು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಷಡ್ಯಂತ್ರವಾಗಿದೆ. ಈ ವಿಚಾರ ರಾಜ್ಯ, ರಾಷ್ಟ್ರಮಟ್ಟ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಅಪಪ್ರಚಾರದಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರನ ಭಕ್ತರಿಗೆ ಮಾನಸಿಕ ಕಿರುಕುಳ ಉಂಟಾಗಿದೆ ಎಂದು ಹೇಳಿದರು.
ಅರ್ಬನ್ ನಕ್ಸಲರ ಒತ್ತಾಯದ ಮೇರೆಗೆ ಮುಖ್ಯಮಂತ್ರಿ ರಾತ್ರೋರಾತ್ರಿ ಎಸ್ಐಟಿ ರಚಿಸಿದ್ದಾರೆ. ಸರ್ಕಾರದ ಈ ಬೇಜವಾಬ್ದಾರಿತನವನ್ನು ಜನರ ಗಮನಕ್ಕೆ ತರುವ ಉದ್ದೇಶದಿಂದ ಬಿಜೆಪಿ ‘ಧರ್ಮಸ್ಥಳ ಚಲೋ’ ಮೂಲಕ ಜಾಗೃತಿ ಮೂಡಿಸಿದೆ ಎಂದು ವಿಜಯೇಂದ್ರ ತಿಳಿಸಿದರು.
ಹಾದಿಬೀದಿಯಲ್ಲಿ ಕೇಳಿದ ಮಾತುಗಳ ಆಧಾರದಲ್ಲಿ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ತೀರ್ಮಾನವನ್ನು ಮುಖ್ಯಮಂತ್ರಿಗಳು ಕೈಗೊಂಡಿದ್ದಾರೆ. ಅಪಪ್ರಚಾರಕ್ಕೆ ಬೆಲೆ ಕಟ್ಟಬೇಕಾದವರು ಯಾರು? ಹಿಂದೂ ಭಾವನೆಗೆ ಧಕ್ಕೆ ತಂದಿದ್ದರೂ ಮುಖ್ಯಮಂತ್ರಿ ಇದುವರೆಗೂ ಕ್ಷಮೆ ಯಾಚಿಸಿಲ್ಲ. ಬದಲಾಗಿ ತಾವು ಮಾಡಿದ ನಿರ್ಧಾರವೇ ಸರಿಯೆಂದು ಕೈತೊಳೆದುಕೊಂಡಿದ್ದಾರೆ ಎಂದು ಅವರು ಟೀಕಿಸಿದರು.






