ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೆ ಚಿಂತನೆ: ಸಿಎಂ ಸಿದ್ದರಾಮಯ್ಯ ಸುಳಿವು
ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣ ರಾಜ್ಯ ಹಾಗೂ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ರಾಜ್ಯದಲ್ಲಿ ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ರಾತ್ರಿ ಮಾತನಾಡಿದ ಅವರು, ಮರ್ಯಾದೆ ಹತ್ಯೆಗಳನ್ನು ತಡೆಯಲು ಕೇವಲ ಕಾನೂನು ಜಾರಿಗೊಳಿಸುವುದಷ್ಟೇ ಸಾಲದು, ಅದನ್ನು ಕಠಿಣವಾಗಿ ಅನುಷ್ಠಾನಗೊಳಿಸುವುದು ಮುಖ್ಯ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮಗಳ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.
ಡಿಸೆಂಬರ್ 21ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಬರ್ಬರ ಹತ್ಯೆ ಇಡೀ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿತ್ತು. ದಲಿತ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ, ಸ್ವತಃ ತಂದೆಯೇ ಆರು ತಿಂಗಳ ಗರ್ಭಿಣಿಯಾದ ಮಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರೀತಿಸಿ ಮದುವೆಯಾಗಿದ್ದ ಮಾನ್ಯಾಳ ಬರ್ಬರ ಹತ್ಯೆಯ ಜೊತೆಗೆ, ಆಕೆಯ ಪತಿ ವಿವೇಕಾನಂದನ ಕುಟುಂಬದ ಮೇಲೂ ದುಷ್ಕರ್ಮಿಗಳು ಅಟ್ಟಹಾಸ ಮೆರದಿದ್ದರು. ಘಟನೆ ನಡೆದು ಎಂಟು ದಿನಗಳಾದರೂ ಗ್ರಾಮದಲ್ಲಿ ಭಯದ ವಾತಾವರಣ ಇನ್ನೂ ತಣಿದಿಲ್ಲ.
ಈ ಪ್ರಕರಣದ ಬಳಿಕ ವಿವಿಧ ದಲಿತಪರ ಸಂಘಟನೆಗಳು ಹಾಗೂ ಸಾಮಾಜಿಕ ಸಂಘಟನೆಗಳು ಮರ್ಯಾದೆ ಹತ್ಯೆ ವಿರೋಧಿ ವಿಶೇಷ ಕಾನೂನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿವೆ. ಇದೀಗ ಮುಖ್ಯಮಂತ್ರಿಗಳ ಹೇಳಿಕೆಯಿಂದಾಗಿ ಈ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ಆರಂಭವಾಗಿರುವುದು ಸ್ಪಷ್ಟವಾಗಿದೆ.






