ಮುಂಬೈನಲ್ಲಿ ಬಸ್ ಅಪಘಾತ: ನಾಲ್ವರು ಸಾವು, ಒಂಬತ್ತು ಮಂದಿಗೆ ಗಾಯ
ಮಹಾರಾಷ್ಟ್ರ: ಮಹಾರಾಷ್ಟ್ರದ ಮುಂಬೈ ನಗರದಲ್ಲಿ ನಾಗರಿಕ ಸಾರಿಗೆ ಸಂಸ್ಥೆಯ ಬಸ್ ಒಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಮುಂಬೈ ಉಪನಗರದ ಭಾಂಡಪ್ ಪ್ರದೇಶದ ಜನದಟ್ಟಣೆಯ ಸ್ಟೇಷನ್ ರಸ್ತೆಯಲ್ಲಿ ಸೋಮವಾರ ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದ ವೇಳೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಬಸ್ ನಿಯಂತ್ರಣ ಕಳೆದುಕೊಂಡು 10ರಿಂದ 12 ಮಂದಿಗೆ ಗುದ್ದಿದ ಬಳಿಕ ನಿಂತಿದೆ.
ಘಟನೆಯ ಬಳಿಕ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್ ದಿಢೀರ್ ನಿಯಂತ್ರಣ ಕಳೆದುಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.






