ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ
ತಿರುವನಂತಪುರ: ವೈವಿಧ್ಯತೆಯ ನಡುವೆಯೂ ಮನುಷ್ಯರು ಒಗ್ಗಟ್ಟಾಗಿ ಬದುಕುವ ಸಹೃದಯ ಭಾರತ ನಿರ್ಮಾಣವೇ ನಾರಾಯಣಗುರುಗಳ ಗುರಿಯಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದದ ಮಾತುಗಳನ್ನು ಮಾತನಾಡುವ ಅಪಾಯದ ಬಗ್ಗೆ ನಾರಾಯಣಗುರುಗಳು ಎಚ್ಚರಿಸಿದ್ದರು ಎಂದು ಅವರು ಹೇಳಿದರು.
ಕೇರಳದ ತಿರುವನಂತಪುರದಲ್ಲಿ ನಡೆದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾರಾಯಣಗುರುಗಳು ಕೇವಲ ಒಬ್ಬ ಸಂತ ಮಾತ್ರವಲ್ಲ, ಸಮಾನತೆ ಮತ್ತು ನೈತಿಕತೆಯ ಚಳವಳಿಯೇ ಆಗಿದ್ದರು ಎಂದರು. ಹೀಗಾಗಿ ಶಿವಗಿರಿ ತೀರ್ಥಯಾತ್ರೆಯು ಕೂಡ ಚಳವಳಿಯ ಸ್ವರೂಪ ಪಡೆದು, ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜವನ್ನು ಸಾಮಾಜಿಕ ನ್ಯಾಯದ ಕಡೆಗೆ ಮುನ್ನಡೆಸಬೇಕು ಎಂದು ಹೇಳಿದರು.
ಇದೇ ನಾರಾಯಣಗುರುಗಳು ಕಂಡ ಭಾರತ. ಇದೇ ಶಿವಗಿರಿ ಪ್ರತಿಪಾದಿಸುವ ಭಾರತ. ಇಂತಹ ಭಾರತವನ್ನು ನಾವು ಎಲ್ಲರೂ ಸೇರಿ ಗಟ್ಟಿಗೊಳಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಶಿವಗಿರಿ ಮಠವು ಕೇವಲ ಯಾತ್ರಾ ಕೇಂದ್ರವಲ್ಲ, ಅದು ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ಮಾತನಾಡುತ್ತಿರುವುದು ನನ್ನ ಸೌಭಾಗ್ಯ. ಇದು ಬೌದ್ಧಿಕ ಮತ್ತು ಮಾನವಕುಲದ ವಿಶ್ವವ್ಯಾಪಿ ಚಳವಳಿಯಾಗಿದೆ. ಇದು ಭೌಗೋಳಿಕ ಪ್ರವಾಸವಲ್ಲ, ನೈತಿಕತೆಯ ಪ್ರಯಾಣವಾಗಿದೆ ಎಂದು ಅವರು ಹೇಳಿದರು.
ಇಂದಿನ ದಿನಗಳಲ್ಲಿ ರಾಜಕಾರಣ ನೈತಿಕತೆಯಿಂದ ದೂರವಾಗುತ್ತಿದ್ದು, ಧರ್ಮವು ಅಧಿಕಾರಕ್ಕಾಗಿ ಉಪಯೋಗಿಸುವ ಆಯುಧವಾಗುತ್ತಿರುವ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಶಿವಗಿರಿ ಒಂದು ನೈತಿಕ ಚಳವಳಿಯಾಗಿ ನಮಗೆ ಆದರ್ಶವಾಗಬೇಕು. ಶಿವಗಿರಿ ಮಠವು ‘ಜೀವಂತ ಸಂವಿಧಾನ’ದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಗಿರಿ ತೀರ್ಥಯಾತ್ರೆ ಭಾರತದ ಮೂಲ ಕೋಮು-ವಿರೋಧಿ ಆಲೋಚನೆಯ ಪ್ರತೀಕವಾಗಿದೆ. ಸಮಾಜ ಕೃತಕವಾಗಿ ಸೃಷ್ಟಿಸಲ್ಪಟ್ಟ ದ್ವೇಷದಿಂದ ಧ್ರುವೀಕರಣಗೊಳ್ಳುತ್ತಿರುವಾಗ, ಶಿವಗಿರಿ ಪ್ರಾಬಲ್ಯಕ್ಕಿಂತ ಸಂವಾದವನ್ನು, ಶ್ರೇಣೀಕೃತ ವ್ಯವಸ್ಥೆಗಿಂತ ಸಮಾನತೆಯನ್ನು ಮತ್ತು ಸಾಂಕೇತಿಕತೆಯಿಗಿಂತ ನೈತಿಕತೆಯನ್ನು ಎತ್ತಿ ಹಿಡಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.






